ಬೆಂಗಳೂರು: 7ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ನಾಳೆಯಿಂದ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ನಾಳೆಯಿಂದ ಏಕಕಾಲಕ್ಕೆ ಸರ್ಕಾರಿ ಸೇವೆಗಳು ಬಂದ್ ಆಗಲಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಷಡಕ್ಷರಿ, ನಾಳೆಯಿಂದ ಸರ್ಕಾರಿ ನೌಕರರು ಸಾಮೂಹಿಕವಾಗಿ ಮುಷ್ಕರದಲ್ಲಿ ಭಾಗಿಯಾಗುತ್ತಾರೆ. ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ಮಾಡಲಿದ್ದೇವೆ. ಯಾವುದೇ ಸಂಧಾನಕ್ಕೂ ನಾವು ಸಿದ್ದರಿಲ್ಲ. ಮಧ್ಯಂತರ ವರದಿ ಜಾರಿಯಾದರೆ ಮಾತ್ರ ಮುಷ್ಕರ ನಿಲ್ಲಿಸಲಾಗುವುದು ಎಂದರು.
ಈ ಹಿಂದೆಯೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು 7ನೇ ವೇತನ ಆಯೋಗದ ಮಧ್ಯಂತರ ವರದಿ ಸಿದ್ಧಪಡಿಸುತ್ತಿದ್ದೇವೆ ಜಾರಿ ಮಾಡುತ್ತೇವೆ ಎಂದಿದ್ದರು. ಆದರೆ ಮಾಡಿಲ್ಲ. ಕಳೆದ 1 ವರ್ಷದಿಂದ ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ ಈ ತನಕವೂ ಸಿಎಂ ಭರವಸೆ ಈಡೇರಿಲ್ಲ. ಮಧ್ಯಂತರ ವರದಿ ಮೂಲಕ ವೇತನ ಹೆಚ್ಚಳ ಮಾಡುವಂತೆ ಮನವಿ ಮಾಡಿದರೂ ಚರ್ಚೆ ಮಾಡುತ್ತೇವೆ ಎಂದರು. ಈ ವರೆಗೂ ಯಾವುದೇ ನಿರ್ಣಯಕ್ಕೆ ಬಂದಿಲ್ಲ. ಹಾಗಾಗಿ ಮುಷ್ಕರ ಅನಿವಾರ್ಯ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳು ಬಂದ್ ಆಗಲಿವೆ. ಎಲ್ಲಾ ಸರ್ಕಾರಿ ನೌಕರರು, ವೈದ್ಯಾಧಿಕಾರಿಗಳು, ಶಾಲಾ-ಕಾಲೇಜು ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ.