ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಗೆ ದಿನಾಂಕ ಘೋಷಣೆಯಾಗಿದ್ದು, ಜುಲೈ 19 ಹಾಗೂ ಜುಲೈ 22ರಂದು ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ಈ ಬಾರಿ ಎರಡು ದಿನ ಪರೀಕ್ಷೆ ನಡೆಯಲಿದ್ದು, 8,76,581 ವಿದ್ಯಾರ್ಥಿಗಳು ಪರೀಕ್ಷೆಗೆ ಭಾಗಿಯಾಗಲಿದ್ದಾರೆ. 73,066 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಕೋವಿಡ್ ಕಾರಣದಿಂದಾಗಿ 2 ದಿನ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳ ಆತ್ಮಸ್ಥೈರ್ಯ, ಅವರ ಭವಿಷ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆಗಳ ಅಧಿಕಾರಿಗಳ ಸಲಹೆಯನ್ನು ಪಡೆದು ಮುಂಜಾಗೃತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸಲಾಗುತ್ತಿದೆ. ಜುಲೈ 19ರಂದು ಕೋರ್ ವಿಷಯಗಳ ಪರೀಕ್ಷೆ ಬೆಳಿಗ್ಗೆ 10:30ರಿಂದ 2:30ರವರೆಗೆ ನಡೆಯಲಿದ್ದು, ಜುಲೈ 22ರಂದು ಭಾಷಾ ವಿಷಯಗಳ ಪರೀಕ್ಷೆ ಬೆಳಿಗ್ಗೆ 10:30ರಿಂದ 2:30ರವರೆಗೆ ನಡೆಯಲಿದೆ ಎಂದು ಹೇಳಿದರು.