ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸೆಪ್ಟೆಂಬರ್ 9 ರವರೆಗೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಭಾರಿ ಮಳೆಯಿಂದಾಗಿ ರಾಜ್ಯ ರಾಜಧಾನಿಯ ರಸ್ತೆಗಳು ಕೆರೆಗಳಂತಾಗಿದ್ದು ವಾಹನಗಳು ಸಂಚರಿಸುವುದೇ ದುಸ್ತರವಾಗಿದೆ. ಅದರಲ್ಲೂ ಮೂರ್ನಾಲ್ಕು ಅಡಿಗಳಷ್ಟು ನೀರು ರಸ್ತೆಯಲ್ಲಿ ನಿಂತಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕೊರೋನಾ ಅವಧಿಯಲ್ಲಿ ಇದ್ದಂತೆ ಆನ್ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಕಚೇರಿ ಆರಂಭಿಸಿದ್ದ ಕೆಲವೊಂದು ಐಟಿ ಕಂಪನಿಗಳೂ ಸಹ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಸೂಚಿಸಿವೆ ಎನ್ನಲಾಗಿದೆ.