ಕಾರವಾರ: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಖೆ ಮುನ್ಸೂಚನೆ ನೀಡಿದೆ.
ವರುಣಾರ್ಭಟಕ್ಕೆ ಒಂದೇ ದಿನದಲ್ಲಿ ಮೂವರು ಬಲಿಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸುಂಟರಗಾಳಿ ಹೊಡೆತಕ್ಕೆ ಅಡಿಕೆ ತೋಟವೇ ಧರಾಶಾಹಿಯಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಕಣ್ಣು ಹಾಯಿಸಿದಲ್ಲೆಲ್ಲ ನೀರು ನಿಂತಿದ್ದು, ಕುತ್ತಿಗೆವರೆಗೂ ನೀರು ತುಂಬಿ ಹರಿಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ, ಸುಂಟರಗಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಸೊಸೈಟಿ ಬಳಿ ಗುಡ್ಡ ಕುಸಿದು ಹಳ್ಳಿಬೇರು ನಿವಾಸಿ ಅಂಬಾ ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರದ ಬೈಸೆ ಗ್ರಾಮದಲ್ಲಿ ಮಹಿಳೆಯೊಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಜಿಲಮೊಗರು ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಮೈಕೆಲ್ ಎಂಬಾತ ನೀರು ಪಾಲಾಗಿದ್ದಾರೆ.
ಮಳೆ ಅವಾಂತರಕ್ಕೆ ಅಂಕೋಲಾ ತಾಲೂಕಿನ 5ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. ಉಡುಪಿಯ ರಟ್ಟಾಡಿಯಲ್ಲಿ ಭಾರಿ ಸುಂಟರಗಾಳಿ ಹೊಡೆತಕ್ಕೆ 5000ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿವೆ. 2000 ರಬ್ಬರ್ ಮರಗಳು ನಾಶವಾಗಿವೆ. 40ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ.