ಬೆಂಗಳೂರು: ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ, ಮತ್ತು ಇತರೆ ಸೇವಾ ಷರತ್ತುಗಳು ನಿಯಮಗಳು) 2020ರಂತೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇಮಕಾತಿ ವಿಧಾನ, ವಿದ್ಯಾರ್ಹತೆ, ಆಯ್ಕೆ ಸಮಿತಿ ನಿಗದಿಪಡಿಸಿ ಆದೇಶಿಸಲಾಗಿದೆ.
ಡಾಟಾ ಎಂಟ್ರಿ ಆಪರೇಟರ್ ಗಳ ನೇರ ನೇಮಕಾತಿಗೆ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲೆಯನ್ನು ಒಂದು ಜೇಷ್ಠತಾ ಘಟಕವೆಂದು ಪರಿಗಣಿಸಿ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಆಯ್ಕೆ ಮಾಡಿಕೊಳ್ಳತಕ್ಕದ್ದು. ಸದರಿ ಹುದ್ದೆಗೆ ಆಯ್ಕೆಯಾದ ನೌಕರರಿಗೆ ಬಾಪೂಜಿ ಸೇವಾ ಕೇಂದ್ರದಲ್ಲಿ ಸಂಗ್ರಹವಾಗುವ ಮೊತ್ತದಿಂದ ವೇತನ ಪಾವತಿಸಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರು ಸೂಚನೆ ನೀಡಿದ್ದಾರೆ.