
ಬೆಳಗಾವಿ: ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿರುವ ಪ್ರಕರಣ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಎರಡೂ ರಾಜ್ಯಗಳ ನಡುವೆ ಕಳೆದ ಮೂರು ದಿನಗಳಿಂದ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ.
ಕರ್ನಾಟಕ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ವಿರುದ್ಧ ಕನ್ನಡ ಪರ ಸಂಘಟನೆ, ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರೆ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಎಂಇಎಸ್, ಶಿವಸೇನೆ ಪುಂಡರು ಪ್ರತಿಭಟನೆ ನಡೆಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಎರಡೂ ರಾಜ್ಯಗಳ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಉಭಯ ರಾಜ್ಯಗಳ ಗಡಿಯಲ್ಲಿ ಇಂದೂ ಕೂಡ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಪರಿಸ್ಥಿತಿ ಶಾಂತರೀತಿಯಲ್ಲಿ ಮುಂದುವರೆದರೆ ನಾಳೆಯಿಂದ ಬಸ್ ಸಂಚಾರ ನಡೆಸುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ಸಾರಿಗೆ ಅಧಿಕಾರಿಗಳು, ಪೊಲೀಸರು ಮಾರ್ಗಸೂಚಿ ಪ್ರಕಟಿಸುವ ನಿಟ್ಟಿನಲ್ಲಿ ಇಂದು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಎರಡೂ ರಾಜ್ಯಗಳ ಗಡಿವರೆಗೆ ಬಂದು ಅಲ್ಲಿಂದ ಬೇರೆ ವಾಹನಗಳಲ್ಲಿ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.