ಮುಂಬೈ: ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವ ಹೊತ್ತಲ್ಲೇ ಗಡಿ ವಿಚಾರವಾಗಿ ಮತ್ತೆ ಕ್ಯಾತೆ ಆರಂಭಿಸಲು ಮಹಾರಾಷ್ಟ್ರ ಮುಂದಾಗಿದೆ. ಸಂಸದ ಧೈರ್ಯಶೀಲ ಮಾನೆ ಎಂಇಎಸ್ ಸದಸ್ಯರ ಜೊತೆ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿದ್ದಾರೆ.
ಗಡಿ ಭಾಗದ 865 ಹಳ್ಳಿಗಳ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಯೋಜನೆ, ಈ ಯೋಜನೆಯ ಲಾಭ ಪಡೆಯಲು ಎಂಇಎಸ್ ಕಚೇರಿಯ ಪತ್ರ ಅವಶ್ಯ ಹಾಗೂ ಯೋಜನೆ ಲಾಭ ಪಡೆಯಲು ಮರಾಠಿ ಭಾಷಿಕ ಎಂದು ನಮೂದಿಸುವ ಜೊತೆಗೆ ಎಂಇಎಸ್ ಕಚೇರಿ ಪತ್ರ ಕಡ್ಡಾಯದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅಲ್ಲದೇ ಮರಾಠಿ ಭಾಷಿಕರಿಗಾಗಿ ಗಡಿ ಭಾಗದಲ್ಲಿ ಪ್ರತ್ಯೇಕ ಕಚೇರಿ ಸ್ಥಾಪನೆಗೂ ನಿರ್ಧಾರ ಮಾಡಲಾಗಿದೆ. ಕೊಲ್ಲಾಪುರದ ಚಂದಗಡ್ ನಲ್ಲಿ ಕಚೇರಿ ಸ್ಥಾಪನೆಗೆ ಹಾಗೂ ಪ್ರಾದೇಶಿಕ ಆಯುಕ್ತರ ಶ್ರೇಣಿಯ ಅಧಿಕಾರಿ ನೇಮಕ ಮಾಡಲು ತೀರ್ಮಾನಿಸಲಾಗಿದೆ.
ಇನ್ನು ಕರ್ನಾಟಕದ 865 ಹಳ್ಳಿಗಳ ಮರಾಠಿ ಭಾಷಿಕರಿಗಾಗಿ ಜನಾರೋಗ್ಯ ಯೋಜನೆ, ಜನಾರೋಗ್ಯ ಯೋಜನೆಯಡಿ ಐದು ಲಕ್ಷ ರೂವರೆಗೆ ಆರೋಗ್ಯ ವಿಮೆ, ಮಹಾರಾಷ್ಟ್ರ ಅಷ್ಟೇ ಅಲ್ಲ ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸೌಲಭ್ಯ ನೀಡಲು ಚಿಂತನೆ ನಡೆಲಾಗಿದೆ. ಈ ಮೂಲಕ ಮಹಾರಾಷ್ಟ್ರ ಗಡಿ ವಿಚಾರವಾಗಿ ಮತ್ತೆ ಹೊಸ ಕ್ಯಾತೆಗೆ ಮುಂದಾಗಿದೆ.