
ನವದೆಹಲಿ: ಚುನಾಯಿತ ಸರ್ಕಾರಗಳನ್ನು ಕೆಡವುವಲ್ಲಿ ಗೂಢಚಾರಿಕೆ ಮಾಡಲಾಗಿದೆ. ಗೂಢಚಾರಿಕೆ ಮಾಡಿರುವುದು ಈಗ ಬಟಾಬಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿಯೇ ಗೂಢಚರ್ಯೆ ನಡೆಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮೊದಲಾದ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರಾದ, ರಣದೀಪ್ ಸುರ್ಜೆವಾಲಾ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ್ ಅವರು, ಆಪರೇಷನ್ ಕಮಲದ ಮೂಲಕ ಪ್ರಜಾತಂತ್ರವನ್ನು ಕಗ್ಗೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಚುನಾಯಿತ ಸರ್ಕಾರಗಳ ನಡುವೆ ಬಿಜೆಪಿ ನಾಯಕರು ಗೂಢಚಾರಿಕೆ ನಡೆಸಿದ್ದಾರೆ. ಗೂಢಚರ್ಯೆ ನಡೆಸಿ ಮೋದಿ ಸರ್ಕಾರ ದೇಶದ್ರೋಹದ ಕೃತ್ಯವೆಸಗಿದೆ. ಪ್ರಧಾನಿ ಮೋದಿ ಸರ್ಕಾರದಿಂದ ಸಂವಿಧಾನದ ಕಗ್ಗೊಲೆ ನಡೆದಿದೆ ಎಂದು ಆರೋಪಿಸಿದ್ದಾರೆ
ರಾಜ್ಯದಲ್ಲಿಯೂ ಪೆಗಾಸಸ್ ಗೂಢಚರ್ಯೆ ನಡೆಸಿದೆ. ಸಮ್ಮಿಶ್ರ ಸರ್ಕಾರ ಉರುಳಿಸುವ ಸಂಚು ರೂಪಿಸಲಾಗಿದೆ. ಕರ್ನಾಟಕದಲ್ಲಿ ಸರ್ಕಾರ ಕೆಡವಿರುವುದು ಬಯಲಾಗಿದೆ. ಕರ್ನಾಟಕ ಮಾತ್ರವಲ್ಲದೆ, ಮಧ್ಯಪ್ರದೇಶ, ಗೋವಾ, ಅರುಣಾಚಲ ಪ್ರದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಕೆಡವಿದ್ದಾರೆ. ಒಂದೇ ಒಂದು ಕ್ಷಣ ಮೋದಿ, ಅಮಿತ್ ಶಾ ಅಧಿಕಾರದಲ್ಲಿ ಇರಬಾರದು ಎಂದು ಹೇಳಿದ್ದಾರೆ.