
ಡಿಸೆಂಬರ್ 25ರ ಸೋಮವಾರದಂದು ಕ್ರಿಸ್ಮಸ್ ಹಬ್ಬವಿದೆ. ಸೋಮವಾರ ರಜೆ ಇರುವ ಕಾರಣಕ್ಕಾಗಿ ಶುಕ್ರವಾರ ಸಂಜೆಯಿಂದಲೇ ಬಹುತೇಕರು ಊರಿಗೆ ಹೊರಡಲು ತಯಾರಾಗುತ್ತಾರೆ. ಅಂಥವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗುಡ್ ನ್ಯೂಸ್ ನೀಡಿದೆ.
ಡಿಸೆಂಬರ್ 22 ರಿಂದ ಡಿಸೆಂಬರ್ 24 ರ ವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಪ್ರದೇಶಗಳಿಗೆ ಹೆಚ್ಚುವರಿಯಾಗಿ 1000 ಬಸ್ಸುಗಳನ್ನು ಸಂಚಾರಕ್ಕೆ ಬಿಡುತ್ತಿದೆ. ಅಲ್ಲದೆ ಡಿಸೆಂಬರ್ 25ರಂದು ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ಸ್ಥಳಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ವಿಶೇಷ ಬಸ್ ಸೇವೆ ಕಲ್ಪಿಸಲಾಗುತ್ತಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಶಿವಮೊಗ್ಗ, ಮಂಗಳೂರು, ಧರ್ಮಸ್ಥಳ ಉತ್ತರ ಮತ್ತು ಕಲ್ಯಾಣ ಕರ್ನಾಟಕದ ವಿವಿಧ ಸ್ಥಳಗಳಿಗೆ ಬಸ್ ಸಂಚಾರ ಇರಲಿದ್ದು, ಅದೇ ರೀತಿ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ ಕುಶಾಲನಗರ ಮಾರ್ಗದಲ್ಲಿ ಬಸ್ಸುಗಳು ಸಂಚರಿಸಲಿವೆ.
ಹಾಗೆಯೇ ಶಾಂತಿನಗರ ಬಿಎಂಟಿಸಿ ನಿಲ್ದಾಣದಿಂದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚ್ಚಿ, ಪಾಲಕ್ಕಾಡ್, ತ್ರಿಶೂರ್, ಕೊಯಿಕೋಡ್, ಎರ್ನಾಕುಲಂ, ಕ್ಯಾಲಿಕಟ್ ಮಾರ್ಗದಲ್ಲಿ ಕೂಡ ಬಸ್ಸುಗಳು ಸಂಚರಿಸಲಿವೆ. ಇನ್ನು ನಾಲ್ಕು ಅಥವಾ ಅದಕ್ಕಿಂತ ಅಧಿಕ ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಲಭ್ಯವಾಗುತ್ತದೆ. ಜೊತೆಗೆ ಹೋಗುವ ಮತ್ತು ಬರುವ ಎರಡು ಟಿಕೆಟ್ ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ಶೇಕಡ 10 ರಿಯಾಯಿತಿ ಲಭ್ಯವಾಗಲಿದೆ.