ಬೆಂಗಳೂರು: ಇಂಧನ ಕ್ಷೇತ್ರದ ಸಂಶೋಧನಾ ಸಂಸ್ಥೆ ಷೆರ್ವನ್ ಬೆಂಗಳೂರಿನಲ್ಲಿ 8300 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ.
ಷೆರ್ವನ್ ಇಂಡಿಯಾ ಮುಖ್ಯಸ್ಥ ಅಕ್ಷಯ್ ಸಾಹ್ನಿ, ಪ್ರಧಾನ ವ್ಯವಸ್ಥಾಪಕಿ ಅವರೊಂದಿಗೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಸಭೆ ನಡೆಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಷೆರ್ವನ್ ಕಂಪನಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮತ್ತು ನಾವೀನ್ಯತೆ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲಿದೆ. ಈ ಕೇಂದ್ರಗಳ ಮೂಲಕ ಇಂಧನ ವ್ಯವಸ್ಥೆಯ ತಂತ್ರಜ್ಞಾನದ ಆವಿಷ್ಕಾರಗಳಿಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ.
ಇಂಜಿನಿಯರಿಂಗ್ ಮತ್ತು ಡಿಜಿಟಲ್ ಸೇವೆಗೆ ಸಂಬಂಧಿಸಿದಂತೆ 2025 ರೊಳಗೆ 600 ತಂತ್ರಜ್ಞರ ನೇಮಕ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ 500ಕ್ಕೂ ಅಧಿಕ ಜಾಗತಿಕ ಸಾಮರ್ಥ್ಯ ಕೇಂದ್ರಗಳಿವೆ. ಆರೋಗ್ಯ, ರಿಟೇಲ್ ವ್ಯಾಪಾರ, ಹಣಕಾಸು ತಯಾರಿಕಾ ವಲಯ ಸೇರಿ ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಶೇಕಡ 30ಕ್ಕಿಂತ ಹೆಚ್ಚು ಪಾಲನ್ನು ಬೆಂಗಳೂರು ಹೊಂದಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕವು ಹೂಡಿಕೆದಾರರ ನೆಚ್ಚಿನ ತಾಣವಾಗಿದ್ದು, ಮತ್ತಷ್ಟು ಸದೃಢತೆಯಿಂದ ಮುನ್ನಡೆಯಲಿದೆ. ನವೀನ ನೀತಿಗಳು ಮತ್ತು ಮಹತ್ವಾಕಾಂಕ್ಷಿ ಯೋಜನೆಗಳೊಂದಿಗೆ ಕರ್ನಾಟಕದ ಪರಿಸರ ವ್ಯವಸ್ಥೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ನಮ್ಮಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.