ಬೆಂಗಳೂರು: ಇನ್ನು ಮುಂದೆ ಕರ್ನಾಟಕ ಗೃಹ ಮಂಡಳಿ ಭೂ ಅನುಪಾತ ಏಕರೂಪದಲ್ಲಿ ಇರುವುದಿಲ್ಲ. ಪಾಲುದಾರಿಕೆಯಲ್ಲಿ ಭೂಮಿ ಪಡೆದು ವಸತಿ ಯೋಜನೆಗೆ ಭೂ ಮೌಲ್ಯವನ್ನಾಧರಿಸಿ ಅನುಪಾತ ನಿಗದಿ ಮಾಡಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ಗೃಹ ಮಂಡಳಿಯಿಂದ ಅನುಪಾತದ ಪಾಲುದಾರಿಕೆ ಅಡಿಯಲ್ಲಿ ಭೂಮಿ ಪಡೆದು ಅನುಷ್ಠಾನ ಮಾಡುವ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಭೂ ಮಾಲೀಕರ ಜೊತೆ ಮಾಡಿಕೊಳ್ಳುವ ಅನುಪಾತವನ್ನು ಆಯಾ ಪ್ರದೇಶ ಯೋಜನೆಯ ಆಧಾರದಲ್ಲಿ ನಿಗದಿಪಡಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಮೈಸೂರು, ಬೆಂಗಳೂರು, ಹುಬ್ಬಳ್ಳಿ -ಧಾರವಾಡ ಮೊದಲಾದ ನಗರ ಪ್ರದೇಶಗಳಲ್ಲಿ ಜಮೀನುಗಳ ಮೌಲ್ಯ ಹಾಗೂ ಗ್ರಾಮೀಣ ಪ್ರದೇಶದ ಜಮೀನುಗಳ ಮೌಲ್ಯ ಭಿನ್ನವಾಗಿರುವುದರಿಂದ ಅನುಪಾತದ ಪಾಲುದಾರಿಕೆ ಅಡಿಯಲ್ಲಿ ಭೂಮಿ ಪಡೆದು ವಸತಿ ಯೋಜನೆ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಪ್ರತಿ ನಗರಕ್ಕೆ ಒಂದೊಂದು ಅನುಪಾತ ನಿಗದಿಪಡಿಸಬೇಕಿದೆ.
ಗೃಹ ಮಂಡಳಿ ಯೋಜನೆಗಳಿಗೆಲ್ಲ ಒಂದೇ ರೀತಿಯ ಸಾಮಾನ್ಯ ನೀತಿ ರೂಪಿಸದೆ ಆಯಾ ಪ್ರದೇಶದ ಮೌಲ್ಯವನ್ನಾಧರಿಸಿ ಅನುಪಾತ ನಿಗದಿ ಮಾಡಿ ಭೂಮಾಲೀಕರೊಂದಿಗೆ ಭೂಮಿ ಪಡೆದು ವಸತಿ ಯೋಜನೆ ಅನುಷ್ಠಾನಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.