ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಮಂಗಳವಾರ ತಮ್ಮ ಕ್ಷೇತ್ರ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮವನ್ನು ಸ್ಥಾಪಿಸಿದವರು ಯಾರು ಎಂಬ ಪ್ರಶ್ನೆ ಇನ್ನೂ ಇದೆ ಎಂದು ಹೇಳಿದರು.
ವಿವಿಧ ಧರ್ಮಗಳು ಮತ್ತು ಅವುಗಳ ಹಿನ್ನೆಲೆಯ ಬಗ್ಗೆ ಮಾತನಾಡಿದ ಪರಮೇಶ್ವರ್ ಅವರು, ಹಿಂದೂ ಧರ್ಮ ಯಾವಾಗ ಪ್ರಾರಂಭವಾಯಿತು ಎಂದು ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ಜಗತ್ತಿನಲ್ಲಿ ಹಲವಾರು ಧರ್ಮಗಳಿವೆ. ಹಿಂದೂ ಧರ್ಮ ಯಾವಾಗ ಹುಟ್ಟಿತು? ಅದು ಎಲ್ಲಿ ಹುಟ್ಟಿತು? ಎಂಬುದು ಇನ್ನೂ ಉತ್ತರ ಸಿಗದ ಪ್ರಶ್ನೆ. ಬೌದ್ಧ ಧರ್ಮ ಹುಟ್ಟಿದ್ದು ಈ ದೇಶದಲ್ಲಿ, ಜೈನ ಧರ್ಮವೂ ಹುಟ್ಟಿದ್ದು ಇಲ್ಲೇ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಹೊರಗಿನಿಂದ ಬಂದವು ಎಂದು ಹೇಳಿದ್ದಾರೆ.
ಪರಮೇಶ್ವರ ಅವರ ಹೇಳಿಕೆಗೆ ಕರ್ನಾಟಕದ ಹಲವು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪರಮೇಶ್ವರ ಅವರು ಹಿಂದೂ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ ಎಂದು ಬಿಜೆಪಿ ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಮೇಲೆ ಕೇಂದ್ರೀಕರಿಸುವ ಬದಲು ಪರಮೇಶ್ವರ ಅವರು ಅಸಹ್ಯಕರ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳುವುದು ನಿಜವಾಗಿಯೂ ಅನಗತ್ಯ ಮತ್ತು ನಾವು ಅವರಿಂದ ಅಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಇದು ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ನಿರ್ದಿಷ್ಟ ಸಮುದಾಯವನ್ನು ಓಲೈಸಲು ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ಪೂಜಾರಿ ಹೇಳಿದ್ದಾರೆ.
ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ಹಿಂದೂ ಸಮುದಾಯವನ್ನು ಲೇವಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪರಮೇಶ್ವರ ಅವರ ಹೇಳಿಕೆ ಹಿಂದೂ ಧರ್ಮವನ್ನು ಅಪಹಾಸ್ಯ ಮಾಡುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಹಿಂದೂ ಧರ್ಮವು ಒಂದು ಸಾಗರವಿದ್ದಂತೆ. ಅದನ್ನು ಬೇರೆ ಯಾವುದೇ ಧರ್ಮದೊಂದಿಗೆ ಹೋಲಿಸಲಾಗುವುದಿಲ್ಲ. ಹಿಂದೂ ಧರ್ಮವು ಎಲ್ಲಾ ಸಮುದಾಯಗಳು ಗೌರವಿಸುವ ಧರ್ಮವಾಗಿದೆ. ಹಲವಾರು ಯುಗಗಳಿಂದ ಹಿಂದೂ ಧರ್ಮವನ್ನು ಅನುಸರಿಸಲಾಗುತ್ತಿದೆ ಎಂದು ರವಿಕುಮಾರ್ ಹೇಳಿದ್ದಾರೆ.