ವಿಚ್ಛೇದನದ ನಂತ್ರ ಮಗನ ಭೇಟಿಗೆ ತಂದೆಗೆ ಅವಕಾಶ ನೀಡದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಮಗನ ಭೇಟಿಯಾಗಲು ತಂದೆಗೆ ಅವಕಾಶ ನೀಡಬೇಕೆಂದು ಕೋರ್ಟ್, ತಾಯಿಗೆ ಸೂಚನೆ ನೀಡಿದೆ. ಪೋಷಕರು ವಿಚ್ಛೇದನ ಪಡೆದಿರಬಹುದು. ಆದರೆ ಮಗು ಇಬ್ಬರಿಂದಲೂ ಜನಿಸಿದೆ. ಹೀಗಿರುವಾಗ ತಂದೆ – ಮಗನ ಭೇಟಿ ಹೇಗೆ ತಡೆಯುತ್ತೀರಿ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಚೆನ್ನೈ ಮೂಲದ ವ್ಯಕ್ತಿಯೊಬ್ಬ, ಮಗನ ಭೇಟಿಗೆ ಅವಕಾಶ ನೀಡುವಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಇಂದಿನ ಮಕ್ಕಳು ಹೆಚ್ಚು ಬುದ್ಧಿವಂತರಾಗಿದ್ದಾರೆ. ಅವರು ಪೋಷಕರಿಗೆ ಸಲಹೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದೆ. ವಿಚ್ಛೇದಿತ ಪತಿ ತನ್ನ 12 ವರ್ಷದ ಮಗನನ್ನು ಭೇಟಿಯಾಗಲು ಅವಕಾಶ ನೀಡಲು ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.
ವಿಚ್ಛೇದಿತ ಪತಿಗೆ ಮಗುವನ್ನು ಭೇಟಿಯಾಗಲು ತಾಯಿ ಅವಕಾಶ ನೀಡುತ್ತಿಲ್ಲ ಎಂದು ತಂದೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅದೇ ವೇಳೆ ಮಗುವಿನ ತಾಯಿ ಪರ ವಾದ ಮಂಡಿಸಿದ ವಕೀಲರು, ಬಾಲಕ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ. ಅರ್ಧವಾರ್ಷಿಕ ಪರೀಕ್ಷೆಗಳು ಈ ತಿಂಗಳ ಕೊನೆಯ ವಾರದಿಂದ ಪ್ರಾರಂಭವಾಗಲಿವೆ. ತಂದೆಯನ್ನು ಭೇಟಿ ಮಾಡಲು ಅವಕಾಶ ನೀಡಿದರೆ, ಅವನ ಅಧ್ಯಯನಕ್ಕೆ ತೊಂದರೆಯಾಗುತ್ತದೆ ಎಂದಿದ್ದರು. ಇಬ್ಬರ ವಾದ ಆಲಿಸಿದ ಕೋರ್ಟ್, ಇಂದಿನ ಮಕ್ಕಳು ಸಾಕಷ್ಟು ಬುದ್ಧಿವಂತರು ಎಂದಿದೆ.
ಬಾಲಕ ಚಳಿಗಾಲ ಮತ್ತು ಬೇಸಿಗೆ ರಜೆಯ ಅರ್ಧದಷ್ಟು ಸಮಯವನ್ನು ತಂದೆ ಜೊತೆ ಕಳೆಯಬಹುದು ಎಂದಿದೆ. ಆದ್ರೆ ಇದಕ್ಕೆ ತಾಯಿ ಪರ ವಕೀಲರು ವಿರೋಧಿಸಿದ್ದಾರೆ. ತಂದೆಗೆ ಇನ್ನೊಂದು ಮದುವೆಯಾಗಿದ್ದು, ಮಗುವಿದೆ. ಹಾಗಿರುವಾಗ, ತಂದೆ ಜೊತೆ ವಾಸ ಸರಿಯಿರುವುದಿಲ್ಲವೆಂದು ವಕೀಲರು ಹೇಳಿದ್ದಾರೆ. ವಿಚಾರಣೆಯನ್ನು ನವಂಬರ್ 24ಕ್ಕೆ ಮುಂದೂಡಿರುವ ಕೋರ್ಟ್, ಮಗನ ಅಭಿಪ್ರಾಯ ತಿಳಿಯಲು ಮುಂದಾಗಿದೆ.