ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ಬಸ್ ಡೋರ್ ಓಪನ್ ಆಗಿದ್ದ ಕಾರಣ ಕೆಳಗೆ ಬಿದ್ದು ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಕುಟುಂಬಸ್ಥರಿಗೆ ನ್ಯಾಯ ಸಿಕ್ಕಿದೆ. ಮಹಿಳೆ ಕುಟುಂಬಸ್ಥರಿಗೆ 26.43 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ನ್ಯಾಯಾಲಯದ ತೀರ್ಪು ಬಸ್ ಸೇವೆ ಒದಗಿಸುವವರ ತೀವ್ರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.
ಘಟನೆ ಆಗಸ್ಟ್ 6, 2019 ರಂದು ನಡೆದಿತ್ತು. 28 ವರ್ಷದ ಮಹಿಳೆ ಜಯಲಕ್ಷ್ಮಿ ಕೆಲಸ ಮುಗಿಸಿ ಮನೆಗೆ ಪ್ರಯಾಣಿಸುತ್ತಿದ್ದಾಗ ರಾಯಚೂರಿನಲ್ಲಿ ಬಸ್ ಪಲ್ಟಿಯಾಗಿತ್ತು. ಬಸ್ ಬಾಗಿಲು ಸರಿಯಿಲ್ಲದ ಕಾರಣ, ಬಸ್ ಪಲ್ಟಿಯಾಗ್ತಿದ್ದಂತೆ ಬಾಗಿಲು ಮುರಿದಿದ್ದು, ಜಯಲಕ್ಷ್ಮಿ ಬಿದ್ದು ಸಾವನ್ನಪ್ಪಿದ್ದರು. ಜಯಲಕ್ಷ್ಮಿ ಅವರ ಇಬ್ಬರು ಮಕ್ಕಳಿಗೆ ಆರಂಭಿಕ ಪರಿಹಾರವಾಗಿ 15.93 ಲಕ್ಷ ರೂಪಾಯಿಯನ್ನು ಎನ್‌ಇಕೆಆರ್‌ಟಿಸಿ ನೀಡುವ ಘೋಷಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಜಯಲಕ್ಷ್ಮಿ ಕುಟುಂಬಸ್ಥರು ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ ಬಾಗಿಲು ಮುರಿದು ಜಯಲಕ್ಷ್ಮಿ ಸಾವನ್ನಪ್ಪಿರೋದನ್ನು ಸಂಸ್ಥೆ ಒಪ್ಪಿಕೊಂಡಿರಲಿಲ್ಲ. ಎನ್‌ಇಕೆಆರ್‌ಟಿಸಿಯ ವಾದವನ್ನು ತಿರಸ್ಕರಿಸಿದ ಹೈಕೋರ್ಟ್ ಪರಿಹಾರದ ಮೊತ್ತವನ್ನು ಎತ್ತಿ ಹಿಡಿದಿದೆ. ನಿರ್ಲಕ್ಷ್ಯಕ್ಕಾಗಿ ನೀಡಲಾದ ಹೆಚ್ಚುವರಿ 10 ಲಕ್ಷ ರೂ.ಗಳನ್ನು ಒಳಗೊಂಡಂತೆ ಒಟ್ಟು ಪರಿಹಾರವಾಗಿ 26.43 ಲಕ್ಷ ನೀಡುವಂತೆ ಸೂಚಿಸಿದೆ.
ಬಸ್‌ನ ಬಾಗಿಲು ಮುರಿದಿರುವುದು ಪ್ರಯಾಣಿಕರಿಗೆ ಸ್ಪಷ್ಟ ಅಪಾಯ ತಂದೊಡ್ಡಿದೆ ಎಂದು ಹೈಕೋರ್ಟ್‌ನ ತೀರ್ಪು ಒತ್ತಿ ಹೇಳಿದೆ. ಅಪಘಾತಕ್ಕೆ ಮುಂಚೆಯೇ ಬಾಗಿಲುಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಸಾಕ್ಷ್ಯಗಳು ಬಹಿರಂಗಪಡಿಸಿವೆ.