ತಾನು ಅಮೆರಿಕ ನಿವಾಸಿಯಾಗಿದ್ದರೂ ಸಹ ಭಾರತದ ನಿವಾಸಿ ಎಂದು ಸುಳ್ಳು ಮಾಹಿತಿ ನೀಡಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ್ದ ಯುವತಿಗೆ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಅನಿವಾಸಿ ಭಾರತೀಯ ಕೋಟಾದಡಿ ಭರಿಸುವ ಶುಲ್ಕವನ್ನು ಪಡೆದು ವಾಪಸ್ ತಮ್ಮ ದೇಶಕ್ಕೆ ತೆರಳಲು ಅವರಿಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಪ್ರಕರಣದ ವಿವರ: ಅರ್ಜಿದಾರರು 1997ರ ಫೆಬ್ರವರಿ 5ರಂದು ಅಮೆರಿಕದಲ್ಲಿ ಭಾರತೀಯ ದಂಪತಿಗೆ ಜನಿಸಿದ್ದು, ಆ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯಲ್ಲಿ ಅಮೆರಿಕ ನಾಗರಿಕ ಎಂದು ನೋಂದಣಿ ಮಾಡಲಾಗಿತ್ತು. ಆದರೆ 2003 ರಲ್ಲಿ ಅವರು ಭಾರತಕ್ಕೆ ಬಂದಿದ್ದು, ಬಳಿಕ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಕರ್ನಾಟಕದಲ್ಲಿಯೇ ಪೂರೈಸಿದ್ದರು.
ನಂತರ ಭಾರತೀಯ ನಿವಾಸಿ ಎಂದು ಅರ್ಜಿ ಸಲ್ಲಿಸಿ ಸರ್ಕಾರಿ ಕೋಟಾದಲ್ಲಿ ಮಂಡ್ಯದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದು ವಾಪಸ್ ಅಮೆರಿಕಾಗೆ ತೆರಳಲು ಬಯಸಿದ್ದರು. ಹೀಗಾಗಿ ಈಗ ಅನಿವಾಸಿ ಭಾರತೀಯ ಕೋಟಾದಡಿ ಭರಿಸುವ ಶುಲ್ಕವನ್ನು ಪಡೆದು ಅವರಿಗೆ ವಾಪಸ್ ತಮ್ಮ ದೇಶಕ್ಕೆ ತೆರಳಲು ಅವಕಾಶ ನೀಡುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.