ಗಂಡನಿಂದ ವಿಚ್ಛೇದನ ಪಡೆಯುವ ಪತ್ನಿಯರು ಪತಿಯಿಂದ ಜೀವನಾಂಶ ಕೇಳುವ ಪರಿಪಾಠ ಇದೆ. ಇಲ್ಲೊಂದು ಪ್ರಕರಣದಲ್ಲಿ ಪತಿಯೇ ಪತ್ನಿಯಿಂದ ಜೀವನಾಂಶ ಕೇಳಿದ್ದಾರೆ.
ಸಹಕಾರಿ ಬ್ಯಾಂಕ್ನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ ತನ್ನ ಮಾಜಿ ಪತ್ನಿಯಿಂದ ಶಾಶ್ವತ ಜೀವನಾಂಶವನ್ನು ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂತಿರ್ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ಇತ್ತೀಚಿನ ತೀರ್ಪಿನಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ, ಪತಿ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದು ಹೇಳಿದೆ.
ಮಾರ್ಚ್ 25, 1993 ರಂದು ಅವರಿಬ್ಬರ ನಡುವೆ ಮದುವೆ ನಡೆದಿತ್ತು. ಫೆಬ್ರವರಿ 1994ರಲ್ಲಿ ತಮ್ಮ ಮಗುವಿಗೆ ಜನ್ಮ ನೀಡಿದ್ದು, ನಂತರ ಮನೆಯನ್ನು ತೊರೆದರು. ಪತಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು, ಶಾಶ್ವತ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಕೌಟುಂಬಿಕ ನ್ಯಾಯಾಲಯವು 2015ರ ಆ.19ರ ಆದೇಶದ ಮೂಲಕ ವಿವಾಹವನ್ನು ವಿಸರ್ಜಿಸಿತು, ಆದರೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಜೀವನಾಂಶವನ್ನು ಕೋರಿ ಪತಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತು.
ಹೈಕೋರ್ಟ್ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ಪತಿ ತಾನು ಗುತ್ತಿಗೆ ಆಧಾರದ ಮೇಲೆ ದೇವಸ್ಥಾನದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಕೆಲಸ ಕಳೆದುಕೊಂಡಿದ್ದೇನೆ ಮತ್ತು ಜೀವನಕ್ಕಾಗಿ ಯಾವುದೇ ಮಾರ್ಗವಿಲ್ಲ ಎಂದು ವಾದಿಸಿದ್ದಾನೆ. ಇದೇ ವೇಳೆ ತಾನು ತಿಂಗಳಿಗೆ 8,000 ರೂ ಗಳಿಸುತ್ತಿದ್ದರೂ ಸುಮಾರು 15 ವರ್ಷ ವಯಸ್ಸಿನ ಮಗನನ್ನು ನೋಡಿಕೊಳ್ಳಬೇಕು ಎಂದು ಮಾಜಿ ಹೆಂಡತಿ ಹೇಳಿಕೊಂಡಿದ್ದಾಳೆ.
ಅಜಿರ್ದಾರ ಪತಿ ತನಗೆ ಆಸ್ತಿ ಇದೆ ಮತ್ತು ಕುಟುಂಬದ ಮನೆಯಲ್ಲಿ ಪಾಲು ಇದೆ ಎಂದು ತನ್ನ ಸಾಕ್ಷ್ಯದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ವಿಭಾಗೀಯ ಪೀಠ ಹೇಳಿದೆ.