ತನ್ನ ಪತಿ ಕಪ್ಪಗಿದ್ದಾನೆಂದು ಜರೆದು ಅವಮಾನಿಸಿದ್ದ ಪತ್ನಿಯ ಧೋರಣೆಯನ್ನು ಕ್ರೌರ್ಯವೆಂದು ಪರಿಗಣಿಸಿರುವ ಹೈಕೋರ್ಟ್, ಪತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡುವ ಮೂಲಕ ವಿಚ್ಛೇದನ ಮಂಜೂರು ಮಾಡಿ ಇತ್ತೀಚೆಗೆ ಮಹತ್ವದ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿವರ: ತನ್ನ ಪತಿ ಕಪ್ಪಗಿದ್ದಾನೆಂದು ಅವಮಾನಿಸುತ್ತಿದ್ದ ಪತ್ನಿ, ಪತಿಯ ಜೊತೆ ವಾಸ ಮಾಡದೆ ತವರು ಮನೆ ಸೇರಿದ್ದರು. ಅಲ್ಲದೆ ಪತಿಯ ವಿರುದ್ಧ ಅಕ್ರಮ ಸಂಬಂಧದ ಆರೋಪವನ್ನು ಹೊರೆಸಿದ್ದು, ಇದೆಲ್ಲದರಿಂದ ಬೇಸತ್ತಿದ್ದ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಆದರೆ ವಿಚ್ಛೇದನ ಮಂಜೂರು ಮಾಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಈ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಹಾಗೂ ಅನಂತ ರಾಮನಾಥ ಹೆಗಡೆ ಅವರುಗಳನ್ನೊಳಗೊಂಡ ವಿಭಾಗಿಯ ಪೀಠ ಇತ್ತೀಚೆಗೆ ತೀರ್ಪು ಪ್ರಕಟಿಸಿದ್ದು, ವಿಚ್ಛೇದನ ಮಂಜೂರು ಮಾಡಿದೆ.
ಒಂದು ವೇಳೆ ಪತ್ನಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರೆ ಇದನ್ನು ಕೌಟುಂಬಿಕ ನ್ಯಾಯಾಲಯ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.