ಹೂಡಿಕೆಗಳನ್ನು ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಇತರೆ ಜಿಲ್ಲೆಗಳತ್ತಲೂ ತಿರುಗಿಸಲು ಸರ್ಕಾರ ಮಹತ್ವದ ಯೋಜನೆಯನ್ನು ರೂಪಿಸಿದ್ದು, ಇದರಿಂದಾಗಿ ಬೆಂಗಳೂರಿನ ಜನಸಂದಣಿ ಕಡಿಮೆಯಾಗುವುದರ ಜೊತೆಗೆ ಇತರ ಭಾಗಗಳು ಸಹ ಅಭಿವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ.
ಬೆಂಗಳೂರಿನಿಂದ ಹೊರಗೆ ಅಂದರೆ ಮೈಸೂರು, ಮಂಗಳೂರು, ಶಿವಮೊಗ್ಗ, ತುಮಕೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಂಡ್ಯ, ಚಾಮರಾಜನಗರ, ಉಡುಪಿ, ಮಣಿಪಾಲ ಮತ್ತು ಕಲಬುರಗಿಯಲ್ಲಿ ಟೆಕ್ ಕ್ಲಸ್ಟರ್ಸ್ ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದರಿಂದಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 2,955 ಸ್ಟಾರ್ಟ್ ಅಪ್ ಗಳ ಸಂಖ್ಯೆ 2032 ರ ವೇಳೆಗೆ 10,000 ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ಯೋಜನೆಯ ಮೇಲ್ವಿಚಾರಣೆ ಮತ್ತು ಅಂಕಿ ಅಂಶಗಳ ಇಲಾಖೆ ಹಾಗೂ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯಲ್ಲಿ ಈ ವಿಷಯ ತಿಳಿಸಲಾಗಿದ್ದು, 2032 ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ಬೆಂಗಳೂರಿಂದ ಹೊರಗೆ ಆರಂಭಿಸಲಾಗುವ ಸ್ಟಾರ್ಟಪ್ ಗಳಿಗೆ ಆರಂಭಿಕ ಹಂತದಲ್ಲಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ, ಮಾರ್ಕೆಟಿಂಗ್ ಮತ್ತು ಪೇಟೆಂಟ್ ಫೈಲಿಂಗ್ ವೆಚ್ಚಗಳು ಹಾಗೂ ಗುಣಮಟ್ಟದ ಪ್ರಮಾಣೀಕರಣದ ಶುಲ್ಕವನ್ನು ಮರುಪಾವತಿಸಲು ಉದ್ದೇಶಿಸಲಾಗಿದೆ.
ಅಲ್ಲದೆ ಕಾರ್ಖಾನೆಗಳ ಕಾಯ್ದೆ, ವೇತನ ಕಾಯ್ದೆ ಮೊದಲಾದವುಗಳ ಅಡಿಯಲ್ಲಿ ಸ್ವಯಂ ಪ್ರಮಾಣೀಕರಣವನ್ನು ಸಲ್ಲಿಸಲು ಸಹ ಹೊಸ ಸ್ಟಾರ್ಟಪ್ ಗಳಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿ ಕೊಡುವ ಸಾಧ್ಯತೆ ಇದೆ. ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸುವ ಸಲುವಾಗಿ ಒಂದು ಸಾವಿರ ಕೋಟಿ ರೂಪಾಯಿಗಳ ‘ಬಿಯಾಂಡ್ ಬೆಂಗಳೂರು ಗ್ರೋಥ್ ಫಂಡ್’ ಸ್ಥಾಪಿಸಲು ಸಹ ಸಮಿತಿ ಶಿಫಾರಸು ಮಾಡಿದೆ.