ಡೆಹ್ರಾಡೂನ್: ಮೇಘಸ್ಫೋಟಕ್ಕೆ ಉತ್ತರಾಖಂಡ ತತ್ತರಿಸಿದ್ದು, ಜಲಪ್ರಳಯದಲ್ಲಿ ಈವರೆಗೆ 42ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರಣಭೀಕರ ಮಳೆಗೆ ಒಂದೆಡೆ ಪ್ರವಾಹ, ಇನ್ನೊಂದೆಡೆ ಭೂಕುಸಿತವುಂಟಾಗುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಉತ್ತರಾಖಂಡ ಜಲಪ್ರವಾಹದಲ್ಲಿ ಕನ್ನಡಿಗರು ಸಿಲುಕಿಕೊಂಡಿದ್ದು, ಊರಿಗೆ ವಾಪಸ್ ಬರಲು ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 10 ಜನ ಕನ್ನಡಿಗರು ಉತ್ತರಾಖಂಡದಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ʼಮಾನ್ಸೂನ್ʼ ಮುಗಿದರೂ ಈ ಪ್ರಮಾಣದಲ್ಲಿ ಮಳೆಯಾಗುತ್ತಿರುವುದೇಕೆ…?
ಬೆಂಗಳೂರು ಮೂಲದ ಮೂವರು, ಉಡುಪಿ ಹಾಗೂ ವಿಜಯಪುರದ ಮೂಲದ ತಲಾ ಒಬ್ಬರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹರಿದ್ವಾರ, ಗಂಗಾ ಘಾಟ್, ಹಲ್ವಾನಿ, ಚಂದ್ರಕೂಟ್ ನಲ್ಲಿ ಸಿಲುಕಿಕೊಂಡಿದ್ದು, ಇವರೆಲ್ಲರೂ ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಯಲಹಂಕ ಮೂಲದ ರಿತೇಶ್ ಭಟ್ ಎಂಬುವವರು ಸಂಪರ್ಕಕ್ಕೆ ಸಿಗುತ್ತಿಲ್ಲ, ನೆಟ್ ವರ್ಕ್ ಸಮಸ್ಯೆಯಿಂದಾಗಿ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಈ ನಡುವೆ ಉತ್ತರಾಖಂಡದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರದಿಂದ ಸಹಾಯವಾಣಿ ತೆರೆಯಲಾಗಿದ್ದು, ರಾಜ್ಯದ ಪ್ರವಾಸಿಗರು, ಪ್ರಯಾಣಿಕರು, ಯಾತ್ರಿಕರು ತೊಂದರೆಯಲ್ಲಿದ್ದರೆ ಸಹಾಯವಾಣಿಗೆ ಕರೆ ಮಾಡುವಂತೆ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸಹಾಯವಾಣಿ ಸಂಖ್ಯೆ: 080-22340676 ಹಾಗೂ 080-1070ಗೆ ಕರೆ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರಕ್ಷಣಾಕಾರ್ಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.