ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವುದು ಸಾಮಾನ್ಯ ಸಂಗತಿ. ಹಣ ಮಾತ್ರವಲ್ಲದೆ ಮಿಕ್ಸರ್, ಕುಕ್ಕರ್, ಸೀರೆ, ಅಹಾರ ಸಾಮಗ್ರಿ ಮೊದಲಾದವುಗಳನ್ನು ನೀಡಲಾಗುತ್ತಿದ್ದು, ಈಗಾಗಲೇ ಚುನಾವಣಾ ಅಧಿಕಾರಿಗಳು ಕೋಟ್ಯಾಂತರ ನಗದು ಹಾಗೂ ಅಷ್ಟೇ ಮೊತ್ತದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇದರ ಮಧ್ಯೆ ವಿಜಯಪುರ ಜಿಲ್ಲೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ವಿಭಿನ್ನ ಸಂಗತಿಯೊಂದು ನಡೆಯುತ್ತಿದೆ. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ್ ಅವರಿಗೆ ನಾಮಪತ್ರ ಸಲ್ಲಿಸಲು ಹಾಗೂ ಚುನಾವಣಾ ಖರ್ಚಿಗಾಗಿ ವೃದ್ಧೆಯೊಬ್ಬರು 50,000 ರೂಪಾಯಿ ನೀಡಲು ನಿರ್ಧರಿಸಿದ್ದಾರೆ. ಇದಕ್ಕೆ ಒಂದು ಕಾರಣವೂ ಇದೆ.
ಬಂಜಾರ ಸಮಾಜದ ಪುತಲಿಬಾಯಿ ರಾಮು ರಾಥೋಡ್ ಮತ್ತವರ ಕುಟುಂಬ 4 ಎಕರೆ ಜಮೀನು ಹೊಂದಿದ್ದರೂ ಸಹ ಬೇಸಿಗೆ ಸಂದರ್ಭದಲ್ಲಿ ನೀರಿಲ್ಲದೆ ಗುಳೆ ಹೋಗಬೇಕಾಗಿತ್ತು. ಆದರೆ ಎಂ.ಬಿ. ಪಾಟೀಲ್ ಸಚಿವರಾಗಿದ್ದ ಸಂದರ್ಭದಲ್ಲಿ ಈ ಭಾಗಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು ಈಗ ಜಮೀನುಗಳು ಹಸಿರಿನಿಂದ ನಳನಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ತಮಗೆ ಬದುಕು ಕಟ್ಟಿಕೊಟ್ಟ ಎಂ.ಬಿ. ಪಾಟೀಲರಿಗೆ ಹಣ ನೀಡಲು ವೃದ್ಧೆ ತೀರ್ಮಾನಿಸಿದ್ದಾರೆ.