ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಕ್ಕಳಿಗೆ ಉಚಿತ ಕರ್ನಾಟಕ ದರ್ಶನ ಪ್ರವಾಸ ಏರ್ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಂಟನೇ ತರಗತಿ ಓದುತ್ತಿರುವ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಎಸ್‌ಸಿಪಿ ಮತ್ತು ಎಸ್.ಟಿ.ಪಿ. ಯೋಜನೆಯಡಿ ಕರ್ನಾಟಕ ದರ್ಶನ ಉಚಿತ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿದೆ.
ಕೊರೋನಾ ಕಾರಣದಿಂದ ಕಳೆದು ಎರಡು ವರ್ಷಗಳಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಈ ವರ್ಷದಿಂದ ಮತ್ತೆ ಆರಂಭಿಸಲಾಗುವುದು. ಪ್ರತಿ ತಾಲೂಕಿನಿಂದ ನಾಲ್ಕು ದಿನಗಳ ಪ್ರವಾಸಕ್ಕೆ ಒಂದು ಬಸ್ ಸೌಲಭ್ಯ ಕಲ್ಪಿಸಲಿದ್ದು, 50 ವಿದ್ಯಾರ್ಥಿಗಳು, ಅವರೊಂದಿಗೆ ಇಬ್ಬರು ಶಿಕ್ಷಕರು, ಅಧಿಕಾರಿಗಳು, ಚಾಲಕ, ಮಾರ್ಗದರ್ಶಕ ಸೇರಿ 55 ಜನರಿಗೆ ಅವಕಾಶ ನೀಡಲಾಗಿದೆ. ಎಲ್ಲ ಮಕ್ಕಳಿಗೂ ಈ ಸೌಲಭ್ಯ ಇರುವುದಿಲ್ಲ. ಸೀಮಿತ ಸಂಖ್ಯೆಯ ಮಕ್ಕಳಿಗೆ ಮಾತ್ರ ಅವಕಾಶ ದೊರೆಯಲಿದೆ. ಪ್ರತಿ ಜಿಲ್ಲೆಯ ಸುಮಾರು 200 ರಿಂದ 300 ಮಕ್ಕಳನ್ನು ಆಯ್ಕೆ ಮಾಡಲು ತಿಳಿಸಲಾಗಿದೆ.
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ, ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ, 7ನೇ ತರಗತಿಯಲ್ಲಿ ಎ ಪ್ಲಸ್, ಎ ಗ್ರೇಡ್ ಪಡೆದವರನ್ನು ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಲಾಗುವುದು. ಮೊರಾರ್ಜಿ ವಸತಿ ಶಾಲೆ, ಇತರೆ ವಸತಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಅವಕಾಶವಿದೆ ಎಂದು ಹೇಳಲಾಗಿದೆ.