ಮೈಸೂರು: ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಿರುವ ರಾಮಲಲ್ಲನ ವಿಗ್ರಹವನ್ನು ಕೆತ್ತಲು ಮೈಸೂರು ಸಮೀಪದ ಗುಜ್ಜೇಗೌಡನಪುರ ಗ್ರಾಮದ ತಮ್ಮ ಜಮೀನಿನಲ್ಲಿ ಕಲ್ಲು ಬಳಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ದಲಿತ ರೈತ ರಾಮದಾಸ್, ತಮ್ಮ ಹಳ್ಳಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಆಸ್ತಿಯ ಭಾಗವನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ಗುಜ್ಜೇಗೌಡನಪುರದಿಂದ ತೆಗೆದ ಕಲ್ಲು ಬಂಡೆಯಿಂದ ವಿಗ್ರಹ ಕೆತ್ತಿರುವುದು ಸಂತಸ ತಂದಿದೆ. ನನ್ನ 2.14 ಎಕರೆ ಭೂಮಿಯಲ್ಲಿನ ಬಂಡೆಗಳನ್ನು ಕೃಷಿಗಾಗಿ ತೆರವುಗೊಳಿಸಿದ್ದೆ. ಉತ್ಖನನ ಮಾಡಿದ ಬಂಡೆಗಳು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಅವಶ್ಯಕತೆಗೆ ಸರಿಹೊಂದಿವೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿದ್ದಾರೆ ಎಂದು ರಾಮದಾಸ್ ಹೇಳಿದ್ದಾರೆ.
ಬಂಡೆಗಳ ತೆರವು ಕಾರ್ಯ ಕೈಗೆತ್ತಿಕೊಂಡ ಸ್ಥಳೀಯ ಕ್ವಾರಿ ಗುತ್ತಿಗೆದಾರ ಶ್ರೀನಿವಾಸ್, ಮೂರು ಬ್ಲಾಕ್ ಗಳಾಗಿ ಒಡೆದಿದ್ದ ಬೃಹತ್ ಬಂಡೆಗಳ ಪೈಕಿ ಒಂದನ್ನು ತೆಗೆಯಲು ಕೆಲವು ದಿನಗಳು ಬೇಕಾಯಿತು. ರಾಮಲಲ್ಲಾ ವಿಗ್ರಹವನ್ನು ಕೆತ್ತಲು ಕಲ್ಲಿನ ಬ್ಲಾಕ್ ಗಾಗಿ ಮನ್ನಯ್ಯ ಬಡಿಗರು, ನರೇಂದ್ರ ಶಿಲ್ಪಿ ಮತ್ತು ಗೋಪಾಲ್ ಅವರನ್ನು ಸಂಪರ್ಕಿಸಿದರು. ನಮ್ಮಲ್ಲಿ 10 ಅಡಿ ಅಳತೆಯ ಮೂರು ಬೃಹತ್ ಕಲ್ಲುಗಳಿವೆ ಎಂದು ನಾನು ಅವರಿಗೆ ಹೇಳಿದಾಗ, ಅವರು ರಾಮದಾಸ್ ಅವರ ಭೂಮಿಗೆ ಭೇಟಿ ನೀಡಿ ಅವುಗಳಲ್ಲಿ ಒಂದನ್ನು ತಜ್ಞರಿಂದ ಪರೀಕ್ಷೆಗಾಗಿ ಅಯೋಧ್ಯೆಗೆ ಕೊಂಡೊಯ್ದರು. ಟ್ರಸ್ಟ್ ಕಲ್ಲಿನ ಬ್ಲಾಕ್ ಅನ್ನು ಆಯ್ಕೆ ಮಾಡಿದೆ.
ಶೀಘ್ರದಲ್ಲೇ, ಭರತ, ಲಕ್ಷ್ಮಣ ಮತ್ತು ಶತ್ರುಘ್ನ ವಿಗ್ರಹಗಳನ್ನು ಕೆತ್ತಲು ಇನ್ನೂ ನಾಲ್ಕು ಬ್ಲಾಕ್‌ಗಳಿಗೆ ಆದೇಶವನ್ನು ಒಂದು ತಿಂಗಳಲ್ಲಿ ತಲುಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶ್ರೀನಿವಾಸ್, ಅಯೋಧ್ಯೆಗೆ ಕಳುಹಿಸಿದ ಕಲ್ಲಿನ ಬ್ಲಾಕ್ ಅನ್ನು ಅಗೆಯಲು ಅನೇಕರು ಶ್ರಮಿಸಿದ್ದಾರೆ. ಆದರೆ, ದೇವಸ್ಥಾನ ಉದ್ಘಾಟನೆಗೆ ಆಹ್ವಾನ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಅವರ ಅಯೋಧ್ಯೆ ಭೇಟಿಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಜನವರಿ 22 ರಂದು ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ರಾಮದಾಸ್ ಅವರು ದಾನ ಮಾಡಲಿರುವ ಜಮೀನಿನಲ್ಲಿ ರಾಮಭಕ್ತರು ಹಾಗೂ ಗ್ರಾಮಸ್ಥರು ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಲಾಗಿದೆ.