ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಕರ್ತವ್ಯದಲ್ಲಿದ್ದ ವೇಳೆ ಸಮರ್ಪಕವಾಗಿ ಅದನ್ನು ನಿಭಾಯಿಸಿದ ಮಹಿಳಾ ಸಬ್ ಇನ್ಸ್ಪೆಕ್ಟರ್ ಒಬ್ಬರು ಸಂಚಾರ ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿ ಆ ಬಳಿಕ ನಿಜ ಸ್ಥಿತಿ ಅರಿವಾದಾಗ ಹಣವನ್ನು ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
ಇಂತಹದೊಂದು ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಮಹಿಳಾ ಎಸ್ಐ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದಾಗ ಮೂವರು ವಿದ್ಯಾರ್ಥಿಗಳು ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಬಂದಿದ್ದಾರೆ. ಜೊತೆಗೆ ಅವರು ಹೆಲ್ಮೆಟ್ ಸಹ ಹಾಕಿರಲಿಲ್ಲ.
ಅವರ ಬೈಕ್ ಅಡ್ಡಗಟ್ಟಿದ ಮಹಿಳಾ ಎಸ್ಐ ನಿಯಮದಂತೆ ದಂಡ ವಿಧಿಸಿದ್ದಾರೆ. ಈ ವೇಳೆ ಒಬ್ಬ ವಿದ್ಯಾರ್ಥಿಯ ಮುಖ ಮಂಕಾಗಿದ್ದು, ವಿಚಾರಿಸಿದಾಗ ದಂಡ ಕಟ್ಟಿದ ಹಣ ಆತನ ಕಾಲೇಜು ಫೀಸ್ ಎಂಬ ಸಂಗತಿ ತಿಳಿದು ಬಂದಿದೆ. ಕೂಡಲೇ ದಂಡದ ಹಣವನ್ನು ಮರಳಿಸಿದ ಮಹಿಳಾ ಎಸ್ಐ ಆತನನ್ನು ಸಾಂತ್ವಾನಗೊಳಿಸಿದ್ದಾರೆ. ಮಾನವೀಯತೆಯನ್ನು ಸಾರುವ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಬ್ ಇನ್ಸ್ಪೆಕ್ಟರ್ ಅವರ ನಡವಳಿಕೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.