ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾಲರಾ ಸೋಂಕು ಹೆಚ್ಚುತ್ತಿದೆ. ಒಂದೆಡೆ ತಾಪಮಾನ ಹೆಚ್ಚಳ, ಕುಡಿಯುವ ನೀರಿನ ಸಮಸ್ಯೆ. ಮತ್ತೊಂದೆಡೆ ರಣಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಈ ನಡುವೆ ಕಾಲರಾ ಸೋಂಕು ಪ್ರಕರಣ ಹೆಚ್ಚುತ್ತಿದೆ.
ರಾಜ್ಯದಲ್ಲಿ ಈವರೆಗೆ 10 ಕಾಲರಾ ಪ್ರಕರಣ ದಾಖಲಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿಯೇ 6 ಪ್ರಕರಣಗಳು ಪತ್ತೆಯಾಗಿವೆ. ಇಂದು ಕಾರು ಚಾಲಕರೊಬ್ಬರಲ್ಲಿ ಕಾಲರಾ ಸೋಂಕು ದೃಢಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಕಾಲರಾ ಪ್ರಕರ ದಾಖಲಾಗಿದೆ. ರಾಮನಗರದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ವಾಂತಿ-ಬೇಧಿ, ನಿರ್ಜಲೀಕರಣ, ಅತಿಸಾರದಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ ಸೇವನೆ, ಕುದಿಸಿ ಆರಿಸಿದ ನೀರು ಸೇವಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿಮುಖ್ಯ. ಈ ನಿಟ್ಟಿನಲ್ಲಿ ಜಾಗೃತಿ ವಹಿಸುವುದು ಸೂಕ್ತ.