ಬೆಂಗಳೂರು : ಕರ್ನಾಟಕ ಸಂಭ್ರಮ – 50 ಹಿನ್ನೆಲೆ ತಾಯಿ ಭುವನೇಶ್ವರಿ ಹೆಸರಲ್ಲಿ ಬೃಹತ್ ಕನ್ನಡ ಭವನ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡು 50 ವಸಂತಗಳು ಸಂದಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಸಂಭ್ರಮ – 50 ‘ರ ಸವಿನೆನಪಿಗಾಗಿ ನಾಡದೇವತೆ ತಾಯಿ ಭುವನೇಶ್ವರಿ ಹೆಸರಲ್ಲಿ ಬೃಹತ್ ಕನ್ನಡ ಭವನ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ.ಕನ್ನಡದ ಇತಿಹಾಸ, ಪರಂಪರೆ ಮತ್ತು ಹಿರಿಮೆಯನ್ನು ವಿಶ್ವಾದ್ಯಂತ ಪ್ರಚುರಪಡಿಸುವ ನಮ್ಮ ಸದಾಶಯಕ್ಕೆ ಕನ್ನಡ ಭವನವು ಮತ್ತಷ್ಟು ಬಲ ತುಂಬಲಿದೆ ಎಂದು ಭಾವಿಸಿದ್ದೇನೆ.ಒಬ್ಬ ಹೆಮ್ಮೆಯ, ಸ್ವಾಭಿಮಾನಿ ಕನ್ನಡಿಗನಾಗಿ ಅತ್ಯಂತ ಸಂತೋಷದಿಂದ ಈ ಘೋಷಣೆ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನೂ, 2023 ನವೆಂಬರ್ 1 ರಿಂದ 2024 ರ ನವೆಂಬರ್ 1 ವರೆಗೆ ವರ್ಷವಿಡೀ ಕರ್ನಾಟಕ ಸಂಭ್ರಮವನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ. ನವೆಂಬರ್ 01, 2023 ಕ್ಕೆ 50 ವರ್ಷಗಳು ತುಂಬುತ್ತದೆ. ವಾಸ್ತವವಾಗಿ ಕಳೆದ ವರ್ಷವೇ ಇದನ್ನು ಆಚರಿಸಬೇಕಿತ್ತು. ಆದರೆ ಹಿಂದಿನ ಸರ್ಕಾರದವರು ಮಾಡಿಲ್ಲ. ಈ ಬಾರಿಯ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಇದೊಂದು ಮಹತ್ವದ ಘಳಿಗೆಯಾಗಿದ್ದು, ಇದನ್ನು ವಿಶೇಷವಾಗಿ ಆಚರಿಸದೇ ಹೋದರೆ ಲೋಪವಾಗುತ್ತದೆ ಎಂದು ತೀರ್ಮಾನಿಸಿ, 2023 ನವೆಂಬರ್ 1 ರಿಂದ 2024 ನವೆಂಬರ್ 1 ರವರೆಗೆ ವರ್ಷವಿಡೀ ಕರ್ನಾಟಕ ಸಂಭ್ರಮವನ್ನು ಆಚರಿಸಬೇಕೆಂದು ಘೋಷಿಸಲಾಗಿತ್ತು.