ಬೆಳಗಾವಿ(ಸುವರ್ಣಸೌಧ): ವಿಧಾನಸಭೆಯಲ್ಲಿಂದು ಮತಾಂತರ ನಿಷೇಧ ಬಿಲ್ ಮಂಡಿಸುವ ಸಾಧ್ಯತೆ ಇದೆ. ಕೆಲವು ಬದಲಾವಣೆಗಳೊಂದಿಗೆ ವಿಧೇಯಕ ಮಂಡನೆ ಮಾಡಲಾಗುವುದು.
ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ.
ಒತ್ತಾಯ, ಆಮಿಷವೊಡ್ಡಿ ಮತಾಂತರ ಮಾಡುವುದು ನಿಷೇಧವಾಗಿರುತ್ತದೆ. ಯಾವುದೇ ರೀತಿಯಲ್ಲಿ ಉಡುಗೊರೆ, ಹಣ ಅಥವಾ ವಸ್ತು, ಯಾವುದೇ ಧಾರ್ಮಿಕ ಸಂಸ್ಥೆಗಳ ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ಶಿಕ್ಷಣ, ಉದ್ಯೋಗದ ಆಮಿಷ ಒಡ್ಡುವುದು ಅಪರಾಧವಾಗಿರುತ್ತದೆ. ಮದುವೆಯ ಭರವಸೆ, ಭಾವನಾತ್ಮಕ, ಬಲವಂತವಾಗಿ ಮತಾಂತರ ಮಾಡುವುದು ಕಾನೂನು ಬಾಹಿರವಾಗಿರುತ್ತದೆ. ಈ ರೀತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಮಹಿಳೆಯರು, ಅಪ್ರಾಪ್ತ ವಯಸ್ಕರನ್ನು ಬಲವಂತದ ಮತಾಂತರ ಮಾಡಿದವರಿಗೆ ಕನಿಷ್ಠ ಮೂರು ವರ್ಷದಿಂದ 10 ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.