ಬೆಂಗಳೂರು: ಇಂದಿನಿಂದ ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭವಾಗಿದ್ದು, ಬಿಜೆಪಿ ಶಾಸಕರು ಸದನಕ್ಕೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಅಲ್ಲದೇ ಸದನದ ಒಳಗಡೆ ಬಿಜೆಪಿ ಶಾಸಕರಿಂದ ಜೈಶ್ರೀರಾಮ್ ಘೋಷಣೆ ಹಾಗೂ ಕಾಂಗ್ರೆಸ್ ಶಾಸಕಿರಿಂದ ಜೈ ಭೀಮ್ ಘೋಷಣೆಗಳು ಮೊಳಗಿದವು.
ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಬಿಜೆಪಿ ಶಾಸಕರು ಸದನಕ್ಕೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧದ ಕಾರಿಡಾರ್ ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಮುಖಾಮುಖಿಯಾಗಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಮುನಿರತ್ನ ತನ್ನ ಹೆಗಲ ಮೇಲೆ ಇದ್ದ ಕೇಸರಿ ಶಾಲನ್ನು ತೆಗೆದು ಕಾಂಗ್ರೆಸ್ ಶಾಸಕನಿಗೆ ಹಾಕಿದ ಘಟನೆ ನಡೆದಿದೆ.
ವಿಧಾನಸೌಧದ ಮೊಗಸಾಲೆಯಲ್ಲಿ ಬಿಜೆಪಿ ಶಾಸಕ ಮುನಿರತ್ನ ಹಾಗೂ ಕಾಂಗ್ರೆಸ್ ಶಾಸಕ ರವಿ ಗಣಿಗ ಪರಸ್ಪರ ಮುಖಾಮುಖಿಯಾಗಿದ್ದಾರೆ. ಈ ವೇಳೆ ಮುನಿರತ್ನ ಕೇಸರಿ ಶಾಲು ಹಾಕಲು ನಿಮ್ಮ ಒಪ್ಪಿಗೆ ಇದೆಯೇ ಹಾಕಲೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಶಾಸಕ ರವಿ ಗಣಿಗ ಯಾಕೆ ಹಾಕಲ್ಲ? ಹಾಕಿಕೊಳ್ಳುತ್ತೇವೆ ನಾವೂ ಹಿಂದೂಗಳೇ ಎಂದಿದ್ದಾರೆ. ಬಾರತ ಬಾವುಟ ತರಿಸಬೇಕಿತ್ತಲ್ಲಾ…ಎಂದಿದ್ದಾರೆ. ಇದೇ ವೇಳೆ ಮುನಿರತ್ನ ತನ್ನ ಹೆಗಲಿಗಿದ್ದ ಕೇಸರಿ ಶಾಲನ್ನು ರವಿ ಗಣಿಗ ಅವರಿಗೆ ಹಾಕಿದ್ದು, ಕಾಂಗ್ರೆಸ್ ಶಾಸಕ ಬಿಜೆಪಿ ಶಾಸಕರೊಂದಿಗೆ ಮಾತನಾಡುತ್ತಾ ಸಾಗಿದ ಪ್ರಸಂಗ ನಡೆದಿದೆ.