![](https://kannadadunia.com/wp-content/uploads/2023/09/student-bus.jpg)
ಬೆಂಗಳೂರು: ಗಡಿನಾಡು ವಿದ್ಯಾರ್ಥಿನಿಯೊಬ್ಬರು ಬರೆದ ಪತ್ರಕ್ಕೆ ಸ್ಪಂದಿಸಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಕನ್ನಡದ ವಿದ್ಯಾರ್ಥಿನಿಯರಿಗೆ ಉಚಿತ ಪಾಸ್ ನೀಡಲು ಆದೇಶ ನೀಡಿದೆ.
ಹೊರ ರಾಜ್ಯದ ಗಡಿ ಭಾಗದ ಕನ್ನಡ ಭಾಷೆಯ ವಿದ್ಯಾರ್ಥಿಗಳಿಗೆ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ಪ್ರಯಾಣಿಸಲು ಉಚಿತ ಬಸ್ ಪಾಸ್ ವಿತರಿಸುವಂತೆ ವಿದ್ಯಾರ್ಥಿನಿ ಭುವನೇಶ್ವರಿ .ವಿ.ಮಾಳಿ ಎಂಬುವವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸೂಕ್ತವಾಗಿ ಸ್ಪಂದಿಸಿರುವ ಪ್ರಾಧಿಕಾರ ಇದೀಗ ಗಡಿನಾಡು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಗೆ ಆದೇಶ ನೀಡಿದೆ.
ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟೆ, ಸಾಂಗ್ಲಿ, ಸೊಲ್ಲಾಪುರ ಪ್ರದೇಶಗಳಿಂದ ಕನ್ನಡ ಭಾಷೆ ಕಲಿತಿರುವ ವಿದ್ಯಾರ್ಥಿಗಳು ತಮ್ಮ ಕಾಲೇಜು ಶಿಕ್ಷಣವನ್ನು ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧೆಡೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. 1200ರೂ ನಿಂದ 1500 ರೂ ವರೆಗೆ ಬಸ್ ಪಾಸ್ ಮೊತ್ತ ಪ್ರಯಾಣಿಸುತ್ತಿದ್ದಾರೆ. ರಾಜ್ಯದ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಜಾರಿಯಲ್ಲಿರುವುದನ್ನು ಪ್ರಾಧಿಕರ ಗಮನಿಸಿರುತ್ತದೆ. ಆದರೆ ನಮ್ಮ ಕನ್ನಡಿಗರೇ ಆಗಿದ್ದರೂ ಹೊರರಾಜ್ಯದ ಗಡಿ ಜಿಲ್ಲೆ, ತಾಲೂಕುಗಳಿಂದ ವ್ಯಾಸಂಗಕ್ಕೆ ಪ್ರಯಾಣಿಸಲು ಹಣ ತೆರಬೇಕಾಗಿರುವುದು ಹಾಗೂ ಕನ್ನಡ ಭಾಷೆಯ ಬಡ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ರಾಜ್ಯ ಭಾಷಾವಾರು ವಿಂಗಡಣೆಯ ಸಮಯದಲ್ಲಿ ಶೇ.100ರಷ್ಟು ಕನ್ನಡ ಭಾಷೆ ಮಾತನಾಡುವ ಪ್ರದೇಶಗಳು ಹೊರರಾಜ್ಯದ ವ್ಯಾಪ್ತಿಗೆ ಸೇರಿರುವ ಕಾರಣ ಇಂತಹ ತೊಂದರೆ ಮತ್ತು ಬೆಳವಣಿಗೆಗಳಿಗೆ ಒಳಪಡಬೇಕಾದ ಪ್ರಸಂಗ ಒದಗಿದೆ.
ಇಂತಹ ಸಮಸ್ಯೆಗಳನ್ನು ಗಡಿ ಭಾಗದ ಕನ್ನಡಿಗರ ಹಿತದೃಷ್ಟಿಯಿಂದ ಸ್ಪಂದಿಸಿ ಗಡಿ ಭಾಗದ ಕನ್ನಡಿಗರ ನೋವಿಗೆ ನೆರವಾಗಬೇಕಾಗಿದೆ. ಆದ್ದರಿಂದ ಈ ವಿದ್ಯಾರ್ಥಿಗಳಿಗೂ ಸಹ ರಾಜ್ಯ ರಸ್ತೆ ಸಾರಿಗೆ ಬಸ್ ಗಳಲ್ಲಿ ಉಚಿತ ಪಾಸ್ ವಿತರಣೆ ಮಾಡುವ ಸೌಲಭ್ಯಗಳನ್ನು ವಿತರಿಸುವಂತೆ ಆದೇಶಿಸಲಾಗಿದೆ.