ಬೆಂಗಳೂರು: ರಾಜ್ಯ ಪಠ್ಯಕ್ರಮದ 5, 8 ಮತ್ತು 9ನೇ ತರಗತಿ ಮಕ್ಕಳಿಗೆ ನಡೆಸಿದ ಬೋರ್ಡ್ ಪರೀಕ್ಷೆ ಮೌಲ್ಯಮಾಪನದಲ್ಲಿ ಆದ ಲೋಪಗಳ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶಾಲೆಗಳಿಂದ ದೃಢೀಕರಣ ಕೋರಿದೆ.
ಈ ಸಂಬಂಧ ಪ್ರತಿ ಶಾಲೆಗೆ ಎರಡು ರೀತಿಯ ದೃಢೀಕರಣ ಮಾದರಿಗಳನ್ನು ಮಂಡಳಿ ನೀಡಿದೆ. ಈಗಾಗಲೇ 5, 8 ಮತ್ತು 9ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಿ ಮೌಲ್ಯಮಾಪನ ಪೂರ್ಣಗೊಂಡ ನಂತರ ಸಂಬಂಧಿಸಿದ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ಕಳುಹಿಸಲಾಗಿದೆ.
ಇವುಗಳಲ್ಲಿ ಯಾವುದೇ ಶಾಲೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಲೋಪಗಳಾಗಿದ್ದರೆ ಯಾವ ತರಗತಿ, ಯಾವ ವಿಷಯದ ಎಷ್ಟು ಪತ್ರಿಕೆಗಳಲ್ಲಿ ಲೋಪವಾಗಿವೆ ಎಂಬ ವಿವರಗಳನ್ನು ಸಲ್ಲಿಸಬೇಕು. ಒಂದು ವೇಳೆ ಯಾವುದೇ ಲೋಪ ಇಲ್ಲದಿದ್ದಲ್ಲಿ ಲೋಪಗಳಿಲ್ಲ ಎಂದು ದೃಢೀಕರಣ ಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ.