ಕರ್ನಾಟಕದ ಅರಣ್ಯದಲ್ಲಿ ಎರಡು ವರ್ಷಗಳ ನಂತರ ಕಪ್ಪು ಚಿರತೆಯೊಂದು ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಬಿ ಆರ್ ಟಿ ಹುಲಿ ಸಂರಕ್ಷಣ ಅರಣ್ಯ ಪ್ರದೇಶದಲ್ಲಿ ಈ ಕಪ್ಪು ಚಿರತೆ ಪತ್ತೆಯಾಗಿದೆ. ಈ ಹಿಂದೆ 2020 ರ ಆಗಸ್ಟ್ ನಲ್ಲಿ ಕಪ್ಪು ಚಿರತೆ ಪತ್ತೆಯಾಗಿತ್ತು ಮತ್ತು ನಂತರ ಯಾರ ಕಣ್ಣಿಗೂ ಬಿದ್ದಿರಲಿಲ್ಲ.
ಈ ಕಪ್ಪು ಚಿರತೆ ವನ್ಯಜೀವಿ ತಜ್ಞ ಸಂಜಯ ಗುಬ್ಬಿ ಮತ್ತು ಅವರ ತಂಡದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅರಣ್ಯಾಧಿಕಾರಿಗಳ ಪ್ರಕಾರ, ಕರ್ನಾಟಕದ ಕಬಿನಿ, ಬಂಡೀಪುರ ಅಥವಾ ದಾಂಡೇಲಿಯಲ್ಲಿ ಮತ್ತು ತಮಿಳುನಾಡಿನ ಮದುಮಲೈ ಅರಣ್ಯದಲ್ಲಿ ಕಪ್ಪು ಚಿರತೆಗಳು ಕಂಡುಬರುತ್ತವೆ. 2020 ರಲ್ಲಿ ಬಿ ಆರ್ ಟಿ ಸಂರಕ್ಷಿತ ಅರಣ್ಯ ಪ್ರದೇಶದ ಬೈಲೂರು ಭಾಗದಲ್ಲಿ ಕ್ಯಾಮೆರಾಗೆ ಸೆರೆ ಸಿಕ್ಕಿತ್ತು. ನಂತರ ಡಿಸೆಂಬರ್ ನಲ್ಲಿ ಎಂಎಂ ಗಿರಿಧಾಮದಲ್ಲಿ ಕಂಡಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ಗುಬ್ಬಿ, ಪತ್ತೆಯಾಗಿರುವ ಕಪ್ಪು ಚಿರತೆ ಸುಮಾರು 6 ವರ್ಷ ಪ್ರಾಯದ್ದಾಗಿದೆ ಎಂದಿದ್ದಾರೆ. ಹೊನ್ನಾವರ, ಉಡುಪಿ ಮತ್ತು ಕುಂದಾಪುರಕ್ಕೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶದಲ್ಲಿ ಈ ಕಪ್ಪು ಚಿರತೆಗಳು ಕಂಡುಬರುತ್ತವೆ. ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಇವುಗಳ ಸಂಖ್ಯೆ ಹೆಚ್ಚಿದೆ.