ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪ್ರತಿಭಟನೆಗಳಿಗೆ ಅಭ್ಯಂತರವಿಲ್ಲ ಆದರೆ ಬಂದ್ ಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಸಂಘಟನೆಗಳು ಪ್ರತಿಭಟನೆ ಮಾಡಲು ಸಮಸ್ಯೆ ಇಲ್ಲ. ಆದರೆ ಯಾವುದೇ ರೀತಿಯ ಬಂದ್ ಗಳಿಗೆ ಅವಕಾಶವಿಲ್ಲ. ಯಾವ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿವೆಯೋ ಅವರಿಗೆ ತಿಳಿಸುತ್ತಿದ್ದೇನೆ. ಕೋರ್ಟ್ ಕೂಡ ಹೆಳಿದೆ. ಯಾವುದೇ ಬಂದ್ ಮಾಡುವಂತಿಲ್ಲ. ಇದನ್ನು ಮೀರಿ ಬಂದ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸೆ.26ರಂದು ಬೆಂಗಳೂರು ಬಂದ್ ಮಾಡಿದ್ದರಿಂದ 1500 ರಿಂದ 2000 ಕೋಟಿ ನಷ್ಟ ಆಗಿದೆ. ಈಗ ಮತ್ತೆ ಬಂದ್ ಮಾಡಿದರೆ ಆರ್ಥಿಕ ಸಮಸ್ಯೆ ಆಗಲಿದೆ. ಮೊದಲೇ ಮಳೆ ಇಲ್ಲದೇ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಬಂದ್ ನಿಂದಾಗಿ ಮತ್ತಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ಬಂದ್ ಗೆ ಅವಕಾಶವಿಲ್ಲ ಎಂದು ತಿಳಿಸಿದರು.