ಬೆಂಗಳೂರು: ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಇಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ರೌಡಿಶೀಟರ್ ಗಳು ಸೇರಿದಂತೆ 150 ಜನರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾವೇರಿ ನೀರಿಗಾಗಿ ಸೆ.26ರಂದು ನಡೆದಿದ್ದ ಬೆಂಗಳೂರು ಬಂದ್ ವೇಳೆ ಕೆಲವೆಡೆ ಕಿಡಿಗೇಡಿಗಳು ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದರು. ಇಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಕಾವೇರಿ ನೀರಿಗಾಗಿ 2016ರಲ್ಲಿ ಕರೆ ನೀಡಿದ್ದ ಬಂದ್ ವೇಳೆ ಕಲ್ಲು ತೂರಾಟ ನಡೆಸಿ ಹಲವೆಡೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದರು. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಈ ಗಲಾಟೆಯಲ್ಲಿ ಭಾಗಿಯಾಗಿದ್ದ ಕೆಲ ರೌಡಿಶೀಟರ್ ಗಳು ಸೇರಿದಂತೆ 150 ಜನರನ್ನು ನಿನ್ನೆ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಇನ್ನು ಬೆಂಗಳೂರು ನಗರದಾದ್ಯಂತ ನಿನ್ನೆ ಮಧ್ಯರಾತ್ರಿ 12 ಗಂಟೆಯಿಂದ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.