ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಇಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದು, ಹಲವೆಡೆ ಎಂದಿನಂತೆ ಬಸ್ ಸಂಚಾರವಿದೆ. ಹೋಟೆಲ್, ಅಂಗಡಿ ಮುಂಗಟ್ಟು ತೆರೆದಿವೆ. ಪ್ರಯಾಣಿಕರು ಊರುಗಳತ್ತ ತೆರಳಿದ್ದಾರೆ.
ರಾಮನಗರದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಹೋರಾಟಗಾರರ ಬಗ್ಗೆ ಟೀಕಿಸಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಳಿಸ್ವಾಮಿ ಅಣಕು ಶವಯಾತ್ರೆ ನಡೆಸಲಾಗಿದೆ.
ಕೊಪ್ಪಳ ಕೇಂದ್ರ ಬಸ್ ನಿಲ್ದಾಣ ಎದುರು ಟೈರ್ ಗೆ ಬೆಂಕಿ ಹಚ್ಚಿದ್ದು, ವಿವಿಧ ಕನ್ನಡಪರ ಸಂಘಟನೆಗಳಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಬಸ್ ಮುಂದೆ ಅಡ್ಡಲಾಗಿ ಮಲಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ 15000 ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೊಯ್ಸಳ, ಚೀತಾ ಸಿಬ್ಬಂದಿಯಿಂದ ನಿರಂತರವಾಗಿ ಗಸ್ತು ಇರಲಿದೆ. ಮೆಜೆಸ್ಟಿಕ್, ರೈಲ್ವೆ ನಿಲ್ದಾಣ ಸುತ್ತಮುತ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಅಖಾಡಕ್ಕಿಳಿದಿದ್ದು, ಅಹಿತಕರ ಘಟನೆಗಳು ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ. ಮೈಸೂರು ಬಸ್ ನಿಲ್ದಾಣ ಸೇರಿ ಹಲವೆಡೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಎಂದಿನಂತೆ ವಾಹನ ಸಂಚಾರವಿದೆ.
ಬೆಂಗಳೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಂಡ್ಯ-ಮೈಸೂರು ಭಾಗಗಳಿಗೆ ಸಾರಿಗೆ ಸಂಸ್ಥೆ ಬಸ್ ಗಳು ಸಂಚರಿಸುತ್ತಿದ್ದು, ಊರಿಗೆ ತೆರಳುವ ಪ್ರಯಾಣಿಕರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತ ಸದ್ಯಕ್ಕೆ ಎಂದಿನಂತೆ ವಾಹನ ಸಂಚಾರ ಮುಂದುವರೆದಿದೆ. ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ ನೀಡಲಾಗಿದ್ದು ಎಂದಿನಂತೆ ಹೋಟೆಲ್, ಅಂಗಡಿಗಳು ಓಪನ್ ಆಗಿವೆ.
ಪ್ರತಿಭಟನೆ:
ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು, ಬೆಂಗಳೂರು ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ರ್ಯಾಲಿ ನಡೆಸಲಾಗುವುದು. ವಿವಿಧ ಕನ್ನಡಪರ ಸಂಘಟನೆಗಳಿಂದ ಇಂದು ಬೃಹತ್ ರ್ಯಾಲಿ ನಡೆಯಲಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಶಿವರಾಮೇಗೌಡರ ಬಣ, ರಾಜಕುಮಾರ್ ಅಭಿಮಾನಿ ಸಂಘ, ಓಲಾ, ಉಬರ್ ಚಾಲಕರ ಸಂಘ, ರಾಜ್ಯ ವಕೀಲರ ಸಂಘ, ಆದರ್ಶ ಆಟೋ ಚಾಲಕರ ಸಂಘದಿಂದ ಬಂದ್ ಗೆ ಬೆಂಬಲ ನೀಡಲಾಗಿದೆ.
ಲಾರಿ ಮಾಲೀಕರ ಸಂಘ, ಸಾರಿಗೆ ನೌಕರರಿಂದ ನೈತಿಕ ಬೆಂಬಲ ನೀಡಲಾಗಿದೆ. ಇದರೊಂದಿಗೆ ಹೋಟೆಲ್ ಮಾಲೀಕರ ಸಂಘ ಕೂಡ ನೈತಿಕ ಬೆಂಬಲ ನೀಡಿದೆ. ಎಪಿಎಂಸಿ ವರ್ತಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ, ಪೆಟ್ರೋಲ್ ಬಂಕ್ ಮಾಲೀಕರಿಂದ ಬಂದ್ ಗೆ ಬೆಂಬಲ ನೀಡಲಾಗಿಲ್ಲ.