ಹಾವೇರಿ: ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಒಳ್ಳೆಯದಲ್ಲ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಕೋವಿಡ್ ನಿಂದಾಗಿ ಚಿತ್ರೋದ್ಯಮ ಸಂಕಷ್ಟದಲ್ಲಿದೆ. ಒಂದು ದಿನ ಬಂದ್ ಮಾಡಿದರೆ ಮತ್ತಷ್ಟು ಸಂಕಷ್ಟ ಅನುಭವಿಸುತ್ತದೆ ಎಂದು ಹೇಳಿದ್ದಾರೆ.
ಎಂಇಎಸ್ ನಿಷೇಧಕ್ಕೆ ಅವಕಾಶವಿದ್ದರೆ ಮುಖ್ಯಮಂತ್ರಿಗಳು ಹಿಂಜರಿಯುವುದಿಲ್ಲ ಎಂದ ಅವರು, ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿ ಮುಂದುವರೆಯಲಿದ್ದಾರೆ ಎಂದು ಪಾಟೀಲ್ ಹೇಳಿದ್ದಾರೆ.
ಬಂದ್ ಬಗ್ಗೆ ಮೈಸೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಡಿಸೆಂಬರ್ 31 ರಂದು ಕನ್ನಡಪರ ಸಂಘಟನೆಗಳು ಬಂದ್ ಮಾಡುವುದು ಬೇಡವೆಂದು ಹೇಳಿದ್ದಾರೆ. ಎಂಇಎಸ್ ಪುಂಡಾಟಿಕೆ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಹೀಗಾಗಿ ಹೋರಾಟಗಾರರು ಬಂದ್ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.