ಬೆಂಗಳೂರು: ಡಿಸೆಂಬರ್ 31 ರ ಕರ್ನಾಟಕ ಬಂದ್ ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ. ದಿನಾಂಕವನ್ನು ಬದಲಾವಣೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಬಂದ್ ಗೆ ಬೆಂಬಲಿಸುವ ಕುರಿತಾಗಿ ನಾಳೆ ತೀರ್ಮಾನ ಕೈಗೊಳ್ಳಲಾಗುವುದು. ನನ್ನ ಅಭಿಪ್ರಾಯವನ್ನು ಪತ್ರದ ಮೂಲಕ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾ.ರಾ. ಗೋವಿಂದು ಅವರಿಗೆ ಕಳುಹಿಸುತ್ತೇನೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಬಂದ್ ದಿನಾಂಕ ಬದಲಾವಣೆಗೆ ಸಾ.ರಾ. ಗೋವಿಂದು ಸಹಮತ ವ್ಯಕ್ತಪಡಿಸಿದ್ದಾರೆ. ಚರ್ಚೆಯ ನಂತರ ದಿನಾಂಕ ಬದಲಾವಣೆಯ ಬಗ್ಗೆ ಮನವಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಅಂದು ಕನ್ನಡ ಸಿನಿಮಾಗಳ ಬಿಡುಗಡೆಯಾಗಲಿವೆ. ಅಲ್ಲದೇ, ಹೊಸ ವರ್ಷದ ಹಿಂದಿನ ದಿನ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತದೆ. ಕೊರೋನಾ ತಡೆಗೆ ನೈಟ್ ಕರ್ಫ್ಯೂ, ಕಠಿಣ ನಿರ್ಬಂಧಗಳ ಕಾರಣ ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಅಲ್ಲದೇ, ಕರ್ನಾಟಕ ಬಂದ್ ನಿಂದ ಕನ್ನಡಿಗರಿಗೇ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬಂದ್ ದಿನಾಂಕ ಬದಲಾವಣೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಇನ್ನು ಹಲವು ಕನ್ನಡಪರ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ಅನೇಕರು ನೈತಿಕ ಬೆಂಬಲ ಮಾತ್ರ ನೀಡಿದ್ದಾರೆ. ಇವೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ಗೆ ಡಿಸೆಂಬರ್ 31 ರ ಬದಲಿಗೆ ಬೇರೆ ದಿನ ಕರೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ನಾಳೆ ಕನ್ನಡ ಪರ ಹೋರಾಟಗಾರರು ಚರ್ಚೆ ನಡೆಸಿ ಬಂದ್ ಅದೇ ದಿನ ನಡೆಸಬೇಕೆ ಇಲ್ಲವೇ ದಿನಾಂಕ ಬದಲಿಸಬೇಕೆ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಬಂದ್ ದಿನಾಂಕದಲ್ಲಿ ಬದಲಾವಣೆ ಇಲ್ಲವೆಂದು ನಾಯಕರು ಹೇಳಿರುವುದರಿಂದ ನಾಳಿನ ಸಭೆ ಕುತೂಹಲ ಮೂಡಿಸಿದೆ.