ಬೆಂಗಳೂರು: ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಕೈಬಿಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡಪರ ಹೋರಾಟಗಾರರೊಂದಿಗೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಇಂದು ನಡೆಯಬೇಕಿದ್ದ ಬಂದ್ ಮುಂದೂಡಲಾಗಿದೆ.
ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಅವರು ಸಿಎಂ ಸಭೆಯ ಬಳಿಕ ಬಂದ್ ಹಿಂಪಡೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ 10:30 ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಮೆರವಣಿಗೆ ನಡೆಸಲಾಗುವುದು.
ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಡಿಸೆಂಬರ್ 31 ರಂದು ಹೊಸ ವರ್ಷದ ಹಿಂದಿನ ದಿನವಾಗಿದ್ದು, ವ್ಯಾಪಾರ ವಹಿವಾಟುದಾರರಿಗೆ ತೊಂದರೆಯಾಗುತ್ತದೆ. ಅಲ್ಲದೆ, ಕನ್ನಡ ಸಿನಿಮಾಗಳ ಬಿಡುಗಡೆ ಕೂಡ ಇರುವುದರಿಂದ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕನ್ನಡಿಗರಿಗೆ ತೊಂದರೆಯಾಗುವುದರಿಂದ ಬಂದ್ ಬೇಡವೆಂಬ ಅಭಿಪ್ರಾಯ ಕೇಳಿ ಬಂದಿತ್ತು,
ಅಲ್ಲದೇ, ಅನೇಕ ಸಂಘಟನೆಗಳು ಬಂದ್ ಬೆಂಬಲಿಸಿರಲಿಲ್ಲ. ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡಿದ್ದವು. ಇವೆ ಮೊದಲಾದ ಕಾರಣಗಳಿಂದಾಗಿ ಬಂದ್ ಮುಂದೂಡಲಾಗಿದೆ. ಪ್ರಮುಖವಾಗಿ ಸಿಎಂ ಕನ್ನಡಪರ ಸಂಘಟನೆಗಳ ಹೋರಾಟಗಾರ ವಾಟಾಳ್ ನಾಗರಾಜ್ ಮೊದಲಾದವರೊಂದಿಗೆ ನಡೆಸಿದ ಸಂಧಾನ ಯಶಸ್ವಿಯಾಗಿದೆ.