ಬೆಂಗಳೂರು : ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಜೂನ್ 22 ರಂದು ಕರ್ನಾಟಕ ಬಂದ್ ಗೆ (Karnataka Bandh) ಕರೆ ನೀಡಿದೆ.
ವಿದ್ಯುತ್ ದರ ಇಳಿಕೆ ಮಾಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಜೂನ್ 10 ರವರೆಗೆ ಗುಡುವು ನೀಡಿತ್ತು, ದರ ಹಿಂಪಡೆಯದಿದ್ದರೆ ಕೈಗಾರಿಕೆಗಳನ್ನು ಬಂದ್ ಮಾಡಿ ಪ್ರತಿಭಟನೆಯ ಎಚ್ಚರಿಕೆ ನೀಡಿತ್ತು.
ಹೀಗಾಗಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಒಂದು ದಿನದ ಮಟ್ಟಿಗೆ ಜೂನ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಬಂದ್ ಗೆ ಕರೆ ನೀಡಲಾಗಿದೆ.
ಇನ್ನೂ, ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಿರುವುದರಿಂದ ಎರಡು ತಿಂಗಳ ವಿದ್ಯುತ್ ಬಿಲ್ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.ಎಲ್ಲಾ ಬಗೆಯ ಗ್ರಾಹಕರಿಗೆ ವಿದ್ಯುತ್ ಬಿಲ್ ಭಾಗಶಃ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯುಚ್ಛಕ್ತಿ ಕಾಯ್ದೆ 2003 ರ 56 ನೇ ಸೆಕ್ಷನ್ ಅಡಿ ಭಾಗಶಃ ಬಿಲ್ ಪಾವತಿಸಬಹುದು ಎಂದು ಹೇಳಲಾಗಿದೆ.
ಮಾಸಿಕ ಬಿಲ್ ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಲ್ ಬಂದಲ್ಲಿ ಗ್ರಾಹಕರಿಗೆ ಕಂತಿನಲ್ಲಿ ಬಿಲ್ ಪಾವತಿಸಲು ಅವಕಾಶವಿದ್ದು, ಕೈಗಾರಿಕೆ ಹೊರತುಪಡಿಸಿ ಬೇರೆ ಗ್ರಾಹಕರು ಇದನ್ನು ಬಳಸಿಕೊಂಡಿಲ್ಲ. ಎಲ್ಲ ಗೃಹಬಳಕೆ ಗ್ರಾಹಕರು ಕೂಡ ಲಿಖಿತ ಮನವಿ ಮಾಡಿಕೊಂಡಲ್ಲಿ ಭಾಗಶಃ ಬಿಲ್ ಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ. ದುಪ್ಪಟ್ಟು ಬಿಲ್ ಬಂದಿರುವುದರಿಂದ ಗ್ರಾಹಕರು ಆಕ್ಷೇಪಣೆ ಸಲ್ಲಿಸಿ ಅರ್ಧದಷ್ಟು ಮೊತ್ತವನ್ನು ಮಾತ್ರ ಪಾವತಿಸಬಹುದು.