
ಬೆಂಗಳೂರು: ಕನ್ನಡಿಗರ ಮೇಲೆ ಮರಾಠಿ, ಎಂಇಎಸ್ ಪುಂಡರ ಹಲ್ಲೆ ಖಂಡಿಸಿ ಹಾಗೂ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ, ಧರಣಿ ನಡೆಸುವ ಮೂಲಕ ಎಂಇಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ವಿವಿಧೆಡೆ ಪ್ರತಿಭಟನೆ ಬಳಿಕ ಫ್ರೀಡಂ ಪಾರ್ಕ್ ಗೆ ಬಂದು ಜಮಾವಣೆಗೊಂಡಿರುವ ಕನ್ನಡಪರ ಸಂಘಟನೆಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಎಂಇಎಸ್ ಶವಯಾತ್ರೆ ನಡೆಸಿದ ಕನ್ನಡಪರ ಸಂಘಟನೆ ಕಾರ್ಯಕರ್ತರು ಫ್ರೀಡಂ ಪಾರ್ಕ್ ನಲ್ಲಿ ಶವ ಸಂಸ್ಕಾರ ಮಾಡುವ ಮೂಲಕ ತಿಥಿ ಕಾರ್ಯ ಮಾಡಿದರು. ವಡೆ, ಪಾಯಿಸ ಇಟ್ಟು ಎಂಇಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಎಂಇಎಸ್ ಪುಂಡರ ಅಟ್ಟಹಾಸ ನಿಲ್ಲಬೇಕು. ಸರ್ಕಾರ ಎಂಇಎಸ್ ನಿಷೇಧ ಮಾಡಬೇಕು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಘೋಷಣೆ ಕೂಗಿದರು.