ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಇವತ್ತೇ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ.
ತಮಿಳುನಾಡಿಗೆ ಪ್ರತಿದಿನ 3000 ಕ್ಯುಸೆಕ್ ನೀರು ಬಿಡುಗಡೆ ಮಾಡಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಸೂಚನೆ ಕುರಿತು ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿದ್ದ ಆಕ್ಷೇಪಣೆ ಅರ್ಜಿಗಳ ಬಗ್ಗೆ ಪ್ರಾಧಿಕಾರದಲ್ಲಿ ಶುಕ್ರವಾರ ವಿಚಾರಣೆ ನಡೆಸಲಾಗುವುದು. ಎರಡು ದಿನಗಳ ಹಿಂದೆಯಷ್ಟೇ ತಮಿಳುನಾಡಿಗೆ ಸೆ. 28ರಿಂದ ಅ. 3ರವರೆಗೆ ಪ್ರತಿದಿನ 3000 ಕ್ಯುಸೆಕ್ ನೀರು ಹರಿಸಲು ರಾಜ್ಯಕ್ಕೆ ಪ್ರಾಧಿಕಾರ ಸೂಚನೆ ನೀಡಿತ್ತು.
ಈ ಆದೇಶವನ್ನು ಪ್ರಾಧಿಕಾರದ ಮುಂದೆ ಕರ್ನಾಟಕ ಪ್ರಶ್ನಿಸಲಿದೆ. ಸಭೆಯಲ್ಲಿ ಹಿರಿಯ ಅಧಿಕಾರಿ ರಾಕೇಶ್ ಸಿಂಗ್ ಭಾಗವಹಿಸಲಿದ್ದಾರೆ. ದೆಹಲಿಯ ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಸಭೆ ನಡೆಯಲಿದೆ. ತಮಿಳುನಾಡಿಗೆ ಪ್ರತಿದಿನ 3000 ಕ್ಯುಸೆಕ್ ನೀರು ಹರಿಸಲು ಸಾಧ್ಯವಿಲ್ಲವೆಂದು ರಾಜ್ಯದಿಂದ ವಾದ ಮಂಡಿಸಲಾಗುವುದು.