ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಅನುಕೂಲವಾಗಬೇಕೆಂಬ ಕಾರಣಕ್ಕಾಗಿ ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗ ಮನೆ ಬಾಗಿಲಲ್ಲೇ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇದನ್ನು ಈಗಾಗಲೇ ಸಾಕಷ್ಟು ಮಂದಿ ಉಪಯೋಗಿಸಿಕೊಂಡಿದ್ದಾರೆ.
ಶತಾಯುಷಿಯೊಬ್ಬರು ಮತ ಚಲಾಯಿಸಿದ್ದು, ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರೇ ಈ ವೃದ್ಧರಿಗೆ ಕರೆ ಮಾಡಿ ಅಭಿನಂದಿಸಿದ್ದರು. ಅಲ್ಲದೆ ಮತ್ತೊಂದು ಘಟನೆಯಲ್ಲಿ ತಮ್ಮ ಪತಿ ಸಾವನ್ನಪ್ಪಿದ ನೋವಿನಲ್ಲೂ ವೃದ್ಧೆಯೊಬ್ಬರು ಮತ ಚಲಾಯಿಸಿ ಕರ್ತವ್ಯ ಮೆರೆದಿದ್ದರು.
ಇದರ ಮಧ್ಯೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ 80 ವರ್ಷದ ಮಂಗಮ್ಮ ರಾಜಪ್ಪ ಆಗಸರ ಎಂಬ ವೃದ್ಧೆ ಬುಧವಾರದಂದು ಮನೆಯಲ್ಲಿ ಮತದಾನ ಮಾಡಿದ ಅರ್ಧ ಗಂಟೆಯಲ್ಲಿ ಮೃತಪಟ್ಟಿದ್ದಾರೆ.
ಬುಧವಾರ ಮಧ್ಯಾಹ್ನ 12.19 ಕ್ಕೆ ಅವರು ಮತದಾನ ಮಾಡಿದ್ದು, 12.50 ಕ್ಕೆ ಮೃತಪಟ್ಟಿದ್ದಾರೆ. ಈ ವಿಷಯವನ್ನು ಸಹಾಯಕ ಚುನಾವಣಾ ಅಧಿಕಾರಿ ಅರುಣ ಹೆಚ್. ದೇಸಾಯಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.