
ಚಾರಣ ಪ್ರಿಯರಿಗೆ ರಾಜ್ಯ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಕರ್ನಾಟಕದ ಎಲ್ಲಾ ಟ್ರೆಕ್ಕಿಂಗ್ ತಾಣಗಳಲ್ಲಿಯೂ ಈತಿಂಗಳಾಂತ್ಯಕ್ಕೆ ಆನ್ ಲೈನ್ ಬುಕ್ಕಿಂಗ್ ಆರಂಭವಾಗಲಿದೆ.
ಕರ್ನಾಟಕದ ಎಲ್ಲಾ ಟ್ರೆಕ್ಕಿಂಗ್ ತಾಣಗಳಲ್ಲಿ ಜುಲೈ ಮೂರನೇ ವಾರದಿಂದ ಆನ್ ಲೈನ್ ಬುಕ್ಕಿಂಗ್ ಪರಿಚಯಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಚಾರಣ ಪ್ರಕ್ರಿಯೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮಂಗಳೂರು ವ್ಯಾಪ್ತಿಯಲ್ಲಿ, ಕುದುರೆಮುಖ, ನೇತ್ರಾವತಿ, ಚಿಕ್ಕಮಗಳೂರು ಭಾಗದಲ್ಲಿನ ಕೆಲ ಟ್ರೆಕ್ಕಿಂಗ್ ತಾಣಗಳಲ್ಲಿ ಈಗಾಗಲೇ ಆನ್ ಲೈನ್ ಬುಕ್ಕಿಂಗ್ ಆರಂಭವಾಗಿದೆ. ಈ ತಿಂಗಳ ಅಂತ್ಯಕ್ಕೆ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
ಒಂದೇ ವೆಬ್ ಸೈಟ್ ನಲ್ಲಿ ಎಲ್ಲಾ ಟ್ರೆಕ್ಕಿಂಗ್ ತಾಣಗಳಿಗೂ ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸುವ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗುವುದು. 15 ದಿನಗಳಲ್ಲಿ ವೆಬ್ ಸೈಟ್ ಸಿದ್ಧವಾಗಲಿದೆ. ಟ್ರೆಕ್ಕಿಂಗ್ ಸರಳೀಕರಣಗೊಳಿಸುವ ಹಾಗೂ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.