
ಮೂರು ದಿನಗಳ ಹಿಂದೆ ಪಾಕಿಸ್ತಾನದ ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಕುರಿತಂತೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ದಾಳಿಕೋರರು ಆಫ್ಘಾನಿಸ್ತಾನದವರಲ್ಲ, ಬದಲಾಗಿ ಪಾಕಿಸ್ತಾನದಲ್ಲಿಯೇ ತರಬೇತಿ ಪಡೆದ ಉಗ್ರರು ಎಂಬುದು ಬೆಳಕಿಗೆ ಬಂದಿದೆ.
ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ದಾಳಿ ನಡೆಸಿದ್ದ ಈ ಉಗ್ರರು ಅದನ್ನು ವಶ ಪಡೆಯಲು ಪ್ರಯತ್ನಿಸಿದ್ದರು. ಈ ದಾಳಿಯಲ್ಲಿ ಎಲ್ಲ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಆದರೆ ಮೂವರು ಪೊಲೀಸರು ಸೇರಿದಂತೆ ಓರ್ವ ನಾಗರಿಕ ಕೂಡ ಈ ದಾಳಿಯಲ್ಲಿ ಬಲಿಯಾಗಿದ್ದರು.
ದಾಳಿ ನಡೆದ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಉಗ್ರರು ಇದನ್ನು ನಡೆಸಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ನಡೆಸಿದಾಗ ಓರ್ವ ಉಗ್ರ ಜಲಾ ನೂರ್, ಉತ್ತರ ವಜೀರ್ ಸ್ಥಾನದವನಾಗಿದ್ದರೆ ಮತ್ತೊಬ್ಬ ಉಗ್ರ ಕಿಫಾಯತ್ ಉಲ್ಲಾ ಲಕ್ಕಿ ಮಾರ್ವತ್ ಜಿಲ್ಲೆಯವನು ಎಂದು ಹೇಳಲಾಗಿದೆ.
ಇವರುಗಳು ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ದಾಳಿ ನಡೆಸುವ ಮುನ್ನ ಕಳೆದ ಒಂದು ತಿಂಗಳಿನಿಂದಲೂ ಅಲ್ಲಿನ ಪ್ರತಿಯೊಂದು ವಿವರವನ್ನು ಕಲೆ ಹಾಕಿದ್ದರು ಎಂಬುದು ಈಗ ಬಹಿರಂಗವಾಗಿದೆ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದವರು ಬಳಿಕ ದಾಳಿ ನಡೆಸಿದ್ದರು. ಕರಾಚಿಯಲ್ಲಿ ದಾಳಿ ನಡೆಸಿದ್ದು ಸ್ವಂತ ನೆಲದ ಉಗ್ರರೇ ಎಂಬುದು ಬಹಿರಂಗವಾಗುತ್ತಿದ್ದಂತೆ ಅನೇಕರು ‘ಕರ್ಮ ರಿಟರ್ನ್ಸ್’ ಎಂದು ಹೇಳುತ್ತಿದ್ದಾರೆ.

