ಕಾರವಾರ: ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿಯನ್ನು ಲೈಫ್ ಗಾರ್ಡ್ ಸಿಬ್ಬಂದಿ ಮತ್ತು ಟೂರಿಸ್ಟ್ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಹುಬ್ಬಳ್ಳಿಯಿಂದ ಪ್ರವಾಸಕ್ಕೆ ಆಗಮಿಸಿದ್ದ ತಂಡದಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿ ತೀರದಲ್ಲಿ ಆಟವಾಡುವಾಗ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಮುಂದೆ ಹೋಗಬೇಡಿ ಎಂದು ಸೂಚಿಸಿದ್ದಾರೆ. ಆದರೆ ಮಕ್ಕಳು ಆಟವಾಡುತ್ತ ಮುಂದೆ ಸಾಗಿದ್ದು, ಈ ವೇಳೆ ಜೋರಾಗಿ ಬಂದ ಅಲೆಯೊಂದು ಎಲ್ಲರನ್ನೂ ಸೆಳೆದಿದೆ. ಕುಟುಂಬದವರು ರಕ್ಷಣೆಗಾಗಿ ಕೂಗಾಡಿದ್ದಾರೆ.
ಟೂರಿಸ್ಟ್ ಮಿತ್ರ ಸಿಬ್ಬಂದಿ ಮತ್ತು ಲೈಫ್ ಗಾರ್ಡ್ ಸಿಬ್ಬಂದಿ ಕೂಡಲೇ ಧಾವಿಸಿ ಬಂದು ನೀರುಪಾಲಾಗಿದ್ದ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿಯನ್ನು ರಕ್ಷಿಸಿದ್ದಾರೆ. ನೀರು ಕುಡಿದ ಮಕ್ಕಳು ಪ್ರಜ್ಞೆ ತಪ್ಪಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.