ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಕರವೇ ನಾರಾಯಣಗೌಡ ಸೇರಿದಂತೆ ಹಲವರ ಬಂಧನವನ್ನು ಸಾಹಿತಿ ದೊಡ್ಡರಂಗೇಗೌಡ ತೀವ್ರವಾಗಿ ಖಂಡಿಸಿದ್ದಾರೆ.
ಕರವೇ ಕಾರ್ಯಕರ್ತರನ್ನು ಬಂಧಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಇಂಥಹ ಸ್ಥಿತಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಆಗಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ನಮಗೂ ಸ್ವಾಭಿಮಾನವಿದೆ. ಅಧಿಕಾರದ ಕುರ್ಚಿ ಸಿಕ್ಕಿದೆ ಎಂದು ಕನ್ನಡಕ್ಕಾಗಿ ಹೋರಾಡಿದ ಕಾರ್ಯಕರ್ತರನ್ನು ಬಂಧಿಸಿದ್ದು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಕನ್ನಡದ ಎಲ್ಲಾ ಶಕ್ತಿಗಳು ಇದನ್ನು ಖಂಡಿಸಬೇಕು. ಸ್ಫೋಟವಾಗುವ ಕಾಲ ಸನ್ನಿಹಿತವಾಗಿದೆ. ನಾವಾಗಿಯೇ ಕಾಲು ಕೆದಕಿ ಜಗಳಕ್ಕೆ ಬರುವುದಿಲ್ಲ. ಆದರೆ ಈ ರೀತಿ ಶೋಷಣೆ ಮಾಡಿ ಹಿಂಸೆ ಕೊಟ್ಟರೆ ನಾವು ಏನು ಮಾಡಲು ಸಾದ್ಯ? ಅನ್ಯಾಯವಾದಾಗಲೇ ಪ್ರತಿಭಟಿಸುವುದು. ಸರ್ಕಾರದ ಧೋರಣೆಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.