ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸುತ್ತಿರುವ ರ್ಯಾಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರು ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭಿಸಿದ್ದು, ಏರ್ ಪೋರ್ಟ್ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್, ರಸ್ತೆ, ಯು.ಬಿ.ಸಿಟಿ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯು.ಬಿ.ಸಿಟಿ ರಸ್ತೆಗಳಲ್ಲಿ ದೊಣ್ಣೆಗಳನ್ನು ಹಿಡಿದು ಸಾಗಿರುವ ಕರವೇ ಕಾರ್ಯಕರ್ತರು, ಇಂಗ್ಲೀಷ್ ಬೋರ್ಡ್ ಗಳನ್ನು ಕಿತ್ತು ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡಗಳ ಮೇಲೆ ಇದ್ದ ಇಂಗ್ಲೀಷ್ ಬೋರ್ಡ್ ಗಳನ್ನು ಒಡೆದು ಹಾಕಿದ್ದಾರೆ.
ಹಲವೆಡೆ ಇಂಗ್ಲೀಷ್ ಬೋರ್ಡ್ ಗಳಿರುವ ನಾಮಫಲಕಗಳಿಗೆ ಮಸಿ ಬಳಿದು, ಕನ್ನಡ ನಾಮಫಲಕ ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ಎಂ.ಜಿ.ರಸ್ತೆ, ಬ್ರಿಗೆಡ್ ರಸ್ತೆಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರತಿಭಟನಾ ನಿರತ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.