ಬೆಂಗಳೂರು: ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿನಿಯರಿಗೆ ಸ್ವರಕ್ಷಣ ಕೌಶಲಗಳ ಕರಾಟೆ ತರಬೇತಿಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ತರಬೇತಿ ಮತ್ತೆ ಆರಂಭಿಸಲು ಕರಾಟೆ ತರಬೇತುದಾರರನ್ನು ನಿಯೋಜನೆ ಮಾಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ 5307 ಶಾಲೆಗಳಲ್ಲಿ ಕರಾಟೆ ಕಲಿಸಲಾಗುವುದು. ದೈಹಿಕ ಶಿಕ್ಷಣ, ಸಂಗೀತ ,ಕರಕುಶಲ, ಚಿತ್ರಕಲೆ ಮೊದಲಾದ ಅವಧಿಗಳಲ್ಲಿ ಕರಾಟೆ ಕಲಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಬಗ್ಗೆ ಕರಾಟೆ ತರಬೇತುದಾರರು ತರಬೇತಿ ನೀಡಲಿದ್ದಾರೆ. ಇದಕ್ಕಾಗಿ ಕರಾಟೆ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲಾಗುವುದು. ಅವರಿಗೆ ಮೂರು ಸಾವಿರ ರೂಪಾಯಿ ಗೌರವ ಧನ ನಿಗದಿಪಡಿಸಲಾಗಿದೆ. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಣ ಪ್ರೇಮಿಗಳು, ದಾನಿಗಳ ನೆರವು ಪಡೆದು ಇನ್ನಷ್ಟು ಗೌರವ ಸಂಭಾವನೆ ಕೊಡಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.