ಹಾವೇರಿ: ಆಕಾಶದತ್ತ ಚಿಗುರಿತಲೇ ಬೇರು ಮುತ್ತಾಯಿತಲೇ ಪರಾಕ್ ಎಂದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಗೊರವಯ್ಯ ಕಾರಣಿಕ ನುಡಿದಿದ್ದಾರೆ. ಇದನ್ನು ವರ್ಷದ ಭವಿಷ್ಯವಾಣಿ ಎಂದೇ ಕರೆಯಲಾಗುತ್ತದೆ.
ಶ್ರೀ ಮಾಲತೇಶ ಸ್ವಾಮಿಯ ದಸರಾ ಕಾರಣಿಕೋತ್ಸವದಲ್ಲಿ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ಭವಿಷ್ಯ ನುಡಿದಿದ್ದಾರೆ. ನವರಾತ್ರಿಯಂದು ಒಂಬತ್ತು ದಿನ ಉಪವಾಸವಿರುವ ಗೊರವಯ್ಯ 18 ಅಡಿ ಬಿಲ್ಲನ್ನೇರಿ ಕಾರಣಿಕ ನುಡಿದಿದ್ದಾರೆ.
ಈ ಬಾರಿ ಆಕಾಶದತ್ತ ಚಿಗುರಿತಲೇ ಬೇರು ಮುತ್ತಾಯಿತಲೇ ಪರಾಕ್ ಎಂದು ಅವರು ಭವಿಷ್ಯ ನುಡಿದಿದ್ದು, ಭವಿಷ್ಯ ವಾಣಿ, ಪ್ರಕಾರ ರೈತರಿಗೆ ಒಳ್ಳೆಯ ಬೆಳೆ ಬರಲಿದೆ ಎಂದು ಅರ್ಥೈಸಲಾಗಿದೆ.
ದೇವರ ಗುಡ್ಡದ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಗುರೂಜಿ, ಕಾರಣಿಕ ವಾಣಿಯಂತೆ ಒಳ್ಳೆಯ ಮಳೆಯಾಗುತ್ತದೆ, ರೈತರಿಗೆ ಒಳ್ಳೆಯ ಬೆಳೆ ಬರುತ್ತದೆ. ಅದನ್ನು ತೆಗೆದುಕೊಳ್ಳುವವರಿಗೂ ಒಳ್ಳೆಯದಾಗುತ್ತದೆ. ರಾಜಕೀಯವಾಗಿ ಹೇಳುವುದಾದರೆ ನಾಯಕತ್ವ ಆಕಾಶದತ್ತ ಚಿಗುರುತ್ತದೆ ಎಂದು ವಿಶ್ಲೇಷಿಸಿದ್ದಾರೆ.