ಹಾವೇರಿ ಜಿಲ್ಲೆಯ ಹಣೆಬೆನ್ನೂರು ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ಸನ್ನಿಧಿಯಲ್ಲಿ ಮಹಾನವಮಿ ಅಂಗವಾಗಿ ಕಾರ್ಣಿಕೋತ್ಸವದಲ್ಲಿ ‘ಆಕಾಶದ ಗುಡ್ಡಕ್ಕೆ ಶಿಶು ಏರಿತಲೆ ಪರಾಕ್’ ಎಂದು ಕಾರಣಿಕವಾಗಿದೆ.
ಭವಿಷ್ಯವಾಣಿ ಎಂದೇ ಹೇಳಲಾಗುವ ಈ ಕಾರಣಿಕದ ಪ್ರಕಾರ, ಸಣ್ಣ ರೈತರಿಗೆ ಅನುಕೂಲವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ವಿಶ್ಲೇಷಿಸಲಾಗಿದ್ದು, ಕಾರಣಿಕದ ಪ್ರಕಾರ ಮುಂದಿನ ಮುಖ್ಯಮಂತ್ರಿ ಯುವಕರಾಗಿರುತ್ತಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿನ ಯುವ ರಾಜಕಾರಣಿಗಳಲ್ಲಿ ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಚರ್ಚೆ ನಡೆದಿದೆ. ಬಹುತೇಕರು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿ ಆಗಬಹುದೆಂದು ಚರ್ಚೆ ನಡೆಸಿದ್ದು, ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ರಾಜ್ಯದಲ್ಲಿ ಸಾಕಷ್ಟು ಯುವಕರಿದ್ದು ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಭಾವಿಸುವುದು ಬೇಡ ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮಾತನಾಡಿದ ಅವರು, ಯುವಕ ಮುಖ್ಯಮಂತ್ರಿ ನಾನೇ ಎಂದು ಕೊಳ್ಳಬೇಕಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಮುಂದಿನ ಮುಖ್ಯಮಂತ್ರಿ ಯುವಕರೇ ಆಗಿರುತ್ತಾರೆ ಎಂದು ದೇವರ ಗುಡ್ಡದ ಕಾರ್ಣಿಕದಲ್ಲಿ ಗೊರವಪ್ಪ ನುಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ರಾಜ್ಯದಲ್ಲಿ ಸಾಕಷ್ಟು ಮಂದಿ ಯುವಕರಿದ್ದಾರೆ. ನಾನೇ ಎಂದು ಭಾವಿಸುವುದು ಬೇಡ. ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಯುವಕರಿಗೆ ಸಾಕಷ್ಟು ಅವಕಾಶ ಸಿಗುತ್ತವೆ ಎಂದು ಹೇಳಿದ್ದಾರೆ.