ಸಂಗೀತಕ್ಕೆ ತನ್ನದೇ ಆದ ಸಮ್ಮೋಹನ ಶಕ್ತಿ ಇದೆ. ಇದು ಜಗತ್ತಿನ ಪ್ರತಿಯೊಂದು ಮೂಲೆಯ ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ. ಪಾಕಿಸ್ತಾನದ ಕರಾಚಿಯ ವ್ಯಕ್ತಿಯೊಬ್ಬ ಸಂಗೀತದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಆರೀಫ್ ಖಾನ್ ಎಂಬ ಈ ವ್ಯಕ್ತಿ ಹಿಂದಿಯ ಅಗ್ನಿಪಥ್ ಚಿತ್ರದ ಖ್ಯಾತ ಗಾಯಕ ಸೋನು ನಿಗಮ್ ಹಾಡಿರುವ ಅಭಿ ಮುಜ್ ಮೇನ್ ಕಹಿ ಹಾಡನ್ನು ಸುಶ್ರಾವ್ಯವಾಗಿ ಹಾಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಖಾನ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆರೀಫ್ ಖಾನ್ ರ ಈ ಹಾಡಿನ ವಿಡಿಯೋವನ್ನು ಪಾಕಿಸ್ತಾನಿ ವ್ಲಾಗರ್ ಅಹ್ಮದ್ ಖಾನ್ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆರೀಫ್ ಖಾನ್ ಜೋಕರ್ ರೀತಿಯಲ್ಲಿ ವರ್ಣರಂಜಿತ ಬಟ್ಟೆ ತೊಟ್ಟು, ವಿಗ್ ಅನ್ನು ಧರಿಸಿದ್ದಾರೆ. ಆರೀಫ್ ರೊಂದಿಗೆ ಕೆಲ ಕಾಲ ಮಾತನಾಡಿದ ನಂತರ ಅಹ್ಮದ್ ಖಾನ್ ತಮ್ಮ ವೀಕ್ಷಕರಿಗಾಗಿ ಹಾಡೊಂದನ್ನು ಹಾಡುವಂತೆ ಕೇಳುತ್ತಾರೆ.
ಹೀಗೆ ಕೇಳುತ್ತಿದ್ದಂತೆಯೇ ಆರೀಫ್ ಖಾನ್, ಅಗ್ನಿಪಥ್ ಚಿತ್ರದ ಜನಪ್ರಿಯ ಮತ್ತು ಮನ ಮಿಡಿಯುವ ಹಾಡನ್ನು ಹಾಡಿ ಎಲ್ಲರನ್ನೂ ನಿಬ್ಬೆರಗಾಗಿಸಿದರು.
ಈ ವಿಡಿಯೋವನ್ನು 30 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಲಾಗಿದೆ ಮತ್ತು ಸಾವಿರಾರು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಅಲ್ಲದೇ, ಭಾರತದ ಕಾಮೆಡಿಯನ್ ವರುಣ್ ಗ್ರೋವರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ನೆಟ್ಟಿಗರು ಆರೀಫ್ ಖಾನ್ ರ ನಿಜವಾದ ಪ್ರತಿಭೆಗೆ ತಲೆದೂಗಿದ್ದಾರೆ.