ಬೆಂಗಳೂರು: ಕನ್ನಡದ ಮೊದಲ ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯುಮೆಂಟರಿ ಫಿಲ್ಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಪ್ಪೆ ರಾಗ’ ಕಿರುಚಿತ್ರಕ್ಕೆ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗಿದೆ.
ಗ್ರೀನ್ ಆಸ್ಕರ್ ಎಂದೇ ಖ್ಯಾತಿ ಪಡೆದಿರುವ ಜಾಕ್ಸನ್ ವೈಲ್ಡ್ ಅವಾರ್ಡ್ ಕನ್ನಡದ ‘ಕಪ್ಪೆ ರಾಗ’ ಕಿರುಚಿತ್ರಕ್ಕೆ ದೊರೆತಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ವಿಚಾರ.
ಕಪ್ಪೆ ರಾಗಕ್ಕೆ ಗ್ರೀನ್ ಆಸ್ಕರ್ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಚಿತ್ರತಂಡವನ್ನು ಅಭಿನಂದಿಸಿದ್ದಾರೆ. ಪ್ರತಿಷ್ಠಿತ ಜಾಕ್ಸನ್ ವೈಲ್ಡ್ ಅವಾರ್ಡ್ ಗೆ ಭಾಜನರಾಗಿರುವ ಕನ್ನಡದ ಮೊದಲ ‘ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯು ಫಿಲಂ’ ಕಪ್ಪೆ ರಾಗ ಚಿತ್ರತಂಡಕ್ಕೆ ಅಭಿನಂದನೆಗಳು. ಕರುನಾಡಿನ ಪ್ರತಿಭೆಗಳ ಪರಿಶ್ರಮದ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರಾದ ಜಾಕ್ಸನ್ ವೈಲ್ಡ್ ಅವಾರ್ಡ್ ನಂತಹ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.
ಚಿತ್ರದ ನಿರ್ದೇಶಕ ಪ್ರಶಾಂತ್ ಎಸ್.ನಾಯ್ಕ್ ಹಾಗೂ ಅವರ ತಂಡದ ಸಾಧನೆ ನಾಡಿನ ಯುವ ನಿರ್ದೇಶಕರಿಗೆ ಪ್ರೇರಣೆಯಾಗಲಿ. ಇಂಥಹ ಇನ್ನಷ್ಟು ಚಿತ್ರಗಳು ನಮ್ಮಲ್ಲಿ ಮೂಡಿ ಬಂದು ಕನ್ನಡದ ಕಲರವ ಜಗದಗಲ ಮೊಳಗಲಿ ಎಂದು ಹಾರೈಸಿದ್ದಾರೆ.
ನಿರ್ದೇಶಕ ಪ್ರಶಾಂತ್, ಪಶ್ಚಿಮ ಘಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಒಂದು ಅಪರೂಪದ ಕಪ್ಪೆ ಬಗ್ಗೆ ಗೊತ್ತಾಯಿತಂತೆ. ಕಪ್ಪೆಯ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ಗಿರೀಶ್ ಜನ್ನೆ ಈ ಕಪ್ಪೆಯ ವಿಶೇಷತೆಗಳನ್ನು ತಿಳಿಸಿದ್ದರಂತೆ. ಹೀಗೆ ಮೂಡಿಬಂದಿದ್ದೇ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕುಂಬಾರ ಕಪ್ಪೆ ಎಂಬ ನಿಶಾಚಾರಿ ಕಪ್ಪೆ ಕುರಿತ ‘ಕಪ್ಪೆ ರಾಗ’ ಎಂಬ ಕಿರುಚಿತ್ರ. ಜಾಕ್ಸನ್ ವೈಲ್ಡ್ ಮೀಡಿಯಾದ ಅತ್ಯುತ್ತಮ ಪ್ರಾಣಿ ವರ್ತನೆ ವಿಭಾಗದ ಪ್ರಶಸ್ತಿ ಇದೀಗ ಈ ಕಿರುಚಿತ್ರದ ಪಾಲಾಗಿದೆ.